ರಾಯಚೂರು | ಮೊದಲ ಪ್ರಯತ್ನದಲ್ಲೇ ಗೆದ್ದ ನಿವೃತ್ತ ಐಎಎಸ್ ಅಧಿಕಾರಿ ಜಿ.ಕುಮಾರ್ ನಾಯಕ್
ಜಿ.ಕುಮಾರ್ ನಾಯಕ್ | x/@IamGKumarNaik
ರಾಯಚೂರು : ನಿವೃತ್ತ ಐಎಎಸ್ ಅಧಿಕಾರಿ ಜಿ.ಕುಮಾರ್ ನಾಯಕ್ ತಮ್ಮ ಮೊದಲ ಪ್ರಯತ್ನದಲ್ಲೆ ರಾಯಚೂರು ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶಿಸಿದ್ದಾರೆ.
ಐಎಎಸ್ ಅಧಿಕಾರಿಯಾಗಿ ಹಲವು ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದ ಕುಮಾರ್ ನಾಯಕ್ ಸಾಕಷ್ಟು ಹೆಸರು ಮಾಡಿದ್ದರು. ನಿವೃತ್ತಿಯ ಬೆನ್ನಲ್ಲೇ ಕಾಂಗ್ರೆಸ್ನಿಂದ ಬಿ ಫಾರಂ ಪಡೆದ ಅವರು ರಾಯಚೂರು ಲೋಕಸಭಾ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುವ ಮೂಲಕ ರಾಜಕೀಯ ಹಾಗೂ ಅಧಿಕಾರಿಗಳ ವಲಯದಲ್ಲಿ ಕುತೂಹಲ ಸೃಷ್ಟಿಸಿದ್ದರು.
ಬಿಜೆಪಿ ಅಭ್ಯರ್ಥಿ ರಾಜ ಅಮರೇಶ್ ನಾಯ್ಕ ಅವರ ವಿರುದ್ಧ ಕುಮಾರ್ ನಾಯಕ್ 82,213 ಮತಗಳ ಭರ್ಜರಿ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕುಮಾರ್ ನಾಯಕ್-6,51,009 ಮತಗಳನ್ನು ಪಡೆದಿದ್ದರೆ, ಬಿಜೆಪಿ ರಾಜ ಅಮರೇಶ್ ನಾಯಕ್5,68,796 ಮತಗಳನ್ನು ಪಡೆದಿದ್ದಾರೆ. ಇದೇ ವೇಳೆ ನೋಟಾಗೆ 9,597 ಮತಗಳು ಬಿದ್ದಿವೆ.
ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರವಾಗಿರುವ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ಸುಲಭವಾಗಿರಲಿಲ್ಲ. ಆದರೂ, ಆ ಸವಾಲುಗಳನ್ನು ಮಟ್ಟಿನಿಂತು ಕುಮಾರ್ ನಾಯಕ್ ಗೆಲುವು ಸಾಧಿಸಿದ್ದಾರೆ. ಯಾವುದೇ ವಿವಾದಗಳಿಲ್ಲದೆ ಸರಕಾರಿ ಸೇವೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದ ಕುಮಾರ್ ನಾಯಕ್ ಇದೀಗ ರಾಜಕಾರಣದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.