ರೈಲು ಟಿಕೆಟ್ ದರದ ಪರಿಷ್ಕರಣೆಯ ಅಗತ್ಯವಿದೆ : ಕೇಂದ್ರ ಸಚಿವ ವಿ.ಸೋಮಣ್ಣ
Photo : x/@VSOMANNA_BJP
ಬೆಂಗಳೂರು : ಬಡವರು ಹಾಗೂ ಮಧ್ಯಮ ವರ್ಗದ ಜನರೂ ವಂದೇ ಭಾರತ್ ರೈಲಿನಲ್ಲಿ ಸಂಚರಿಸಲು ಅನುಕೂಲವಗುವಂತೆ ಟಿಕೆಟ್ ದರ ಪರಿಷ್ಕರಣೆಯ ಅಗತ್ಯವಿದ್ದು, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆ ಮಾಡಿರುವುದಾಗಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಂದೇ ಭಾರತ್ ಜೊತೆಗೆ ಎಲ್ಲ ರೈಲುಗಳ ಟಿಕೆಟ್ ದರಗಳ ಪರಿಷ್ಕರಣೆ ಅಗತ್ಯವಿದೆ. ರೈಲ್ವೆ ಇಲಾಖೆಯ ಕಾರ್ಯವೈಖರಿ ಹಾಗೂ ಕೈಗೊಳ್ಳಬೇಕಿರುವ ಅಭಿವೃದ್ಧಿ ಕಾಮಗಾರಿಗಳು, ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ನಗರದ ಜನಪ್ರತಿನಿಧಿಗಳು ಹಾಗೂ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ಮಾಡಿ ಚರ್ಚೆ ನಡೆಸಲಾಗಿದೆ ಎಂದರು.
ರೈಲ್ವೆ ಯೋಜನೆಗಳ ತ್ವರಿತ ಅನುಷ್ಠಾನ ಹಾಗೂ ಯಶಸ್ಸಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು. ರೈಲ್ವೆ ಅಂಡರ್ ಪಾಸ್, ಮೇಲ್ಸೇತುವೆ ಕಾಮಗಾರಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಮನಾಗಿ ಹಣ ಕೊಡಬೇಕಿದೆ. ರಾಜ್ಯ ಸರಕಾರದಿಂದ ಕೆಲವು ಯೋಜನೆಗಳಿಗೆ ಹಣ ಬರುವುದು ಬಾಕಿಯಿದೆ ಎಂದು ಸೋಮಣ್ಣ ತಿಳಿಸಿದರು.
ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಆಧುನೀಕರಣ ಯೋಜನೆಯ ಮೊತ್ತ 485 ಕೋಟಿ ರೂ., ಯಶವಂತಪುರ ರೈಲ್ವೆ ನಿಲ್ದಾಣದ ಆಧುನೀಕರಣ ಯೋಜನೆಯ ಮೊತ್ತ 387 ಕೋಟಿ ರೂ., ಯಶವಂತಪುರ-ಚನ್ನಸಂದ್ರ ನಡುವೆ 25 ಕಿ.ಮೀ ಮತ್ತು ಬೈಯ್ಯಪ್ಪನಹಳ್ಳಿ-ಹೊಸೂರು ನಡುವೆ 48 ಕಿ.ಮೀ. ಹಳಿ ಡಬ್ಲಿಂಗ್ ಯೋಜನೆಗೆ 814 ಕೋಟಿ ರೂ. ವೆಚ್ಚವಾಗಲಿದೆ ಎಂದು ಅವರು ಮಾಹಿತಿ ನೀಡಿದರು.
ತುಮಕೂರು-ಚಿತ್ರದುರ್ಗ-ದಾವಣಗೆರೆ ಮಾರ್ಗಕ್ಕೆ 3 ಡಿಸಿ ನೇಮಕಾತಿ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಿದ್ದೇನೆ. ಸಬ್ ಅರ್ಬನ್ ರೈಲು ಯೋಜನೆಯ ಕಾಮಗಾರಿಗಳು ನಮ್ಮ ನಿರೀಕ್ಷೆಗೆ ತಕ್ಕಂತೆ ನಡೆಯುತ್ತಿಲ್ಲ. 2022ರಲ್ಲಿ ಪ್ರಧಾನಿ ಮೋದಿ ಈ ಯೋಜನೆಗೆ ಚಾಲನೆ ನೀಡಿದಾಗ 40 ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಘೋಷಿಸಲಾಗಿತ್ತು ಎಂದು ಸೋಮಣ್ಣ ಹೇಳಿದರು.
ಜುಲೈ ತಿಂಗಳಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಬ್ ಅರ್ಬನ್ ರೈಲು ಯೋಜನೆ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಈ ಯೋಜನೆಗೆ 11,800 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ. ರಾಜ್ಯ ಸರಕಾರವು ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ತನ್ನ ಪಾಲು 5 ಕೋಟಿ ರೂ.ಗಳನ್ನು ಕೊಡಬೇಕಿದೆ ಎಂದು ಸೋಮಣ್ಣ ತಿಳಿಸಿದರು.