ಬೆಂಗಳೂರಿನಲ್ಲಿ ತುಂತುರು ಮಳೆ, ಚಳಿಗಾಳಿ; ನಾಲ್ಕೈದು ದಿನ ರಾಜ್ಯದ ಕೆಲವೆಡೆ ಮಳೆ ಸಾಧ್ಯತೆ

ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಉಷ್ಣಾಂಶ ಗಣನೀಯ ಕುಸಿತವಾಗಿದ್ದು, ರವಿವಾರ ಮುಂಜಾನೆಯಿಂದಲೇ ತುಂತುರು ಮಳೆಯಾಗುತ್ತಿದ್ದು, ಮುಂದಿನ 5 ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರವಿವಾರ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು ಮತ್ತಿತರ ಪ್ರದೇಶಗಳಲ್ಲಿ ತುಂತುರು ಮಳೆಗೆ ಸಾಕ್ಷಿಯಾಯಿತು. ಹವಾಮಾನ ಇಲಾಖೆ ವರದಿಯ ಪ್ರಕಾರ ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ, ರಾಮನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಕೋಲಾರ ಮತ್ತು ಹಾಸನ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆದಿದೆ.
ಒಂದೆರಡು ಕಡೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಇದೇ ವೇಳೆ ಉಷ್ಣಾಂಶದಲ್ಲಿ ಗಣನೀಯ ಇಳಿಕೆಯಾಗಿದ್ದು, ದಟ್ಟ ಮಂಜು ಆವರಿಸಿದೆ. ರಾಜ್ಯದ ದಕ್ಷಿಣ ಒಳಭಾಗ, ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮುಂದಿನ 5 ದಿನ ಸಾಧಾರಣ ಮಳೆ ಸುರಿಯುವ ಸಾಧ್ಯತೆಯಿದ್ದು, ಉತ್ತರದ ಜಿಲ್ಲೆಗಳಲ್ಲಿ ವೇಗದ ಗಾಳಿ ಇರಲಿದೆ. ರಾಜ್ಯಾದ್ಯಂತ ಸಾಧಾರಣ, ತುಂತುರು ಮಳೆ ಇರಲಿದೆ ಎಂದು ಎಚ್ಚರಿಕೆ ನೀಡಿದೆ.
ರವಿವಾರ ನಗರದ ಎಂ.ಜಿ.ರಸ್ತೆ, ಜಯನಗರ, ಮೆಜೆಸ್ಟಿಕ್ ಸುತ್ತಾಮುತ್ತ, ಸುಲ್ತಾನ್‍ಪಾಳ್ಯ, ಆರ್.ಟಿ.ನಗರ, ಇಂದಿರಾನಗರ, ಹಲಸೂರು ಮತ್ತು ಆರ್.ಆರ್.ನಗರ ಸೇರಿ ಹಲವೆಡೆ ಸಾಧಾರಣ ತುಂತುರು ಮಳೆಯಾಗಿದೆ. ತಾಪಮಾನವು ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ಇರಬಹುದು. ಸೋಮವಾರ ಗರಿಷ್ಠ 26 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ಆಗಬಹುದು. ಬೀದರ್, ಕಲಬುರಗಿ, ರಾಯಚೂರು ಜಿಲ್ಲೆ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ತೀವ್ರ ಚಳಿ ಇರಲಿದೆ ಎಂದು ತಿಳಿಸಿದೆ.