ರಾಜ್ಯದಲ್ಲಿ ಮಳೆ ಅನಾಹುತ; ಎರಡು ತಿಂಗಳಲ್ಲಿ 38 ಮಂದಿ ಮೃತ್ಯು, ಅಪಾರ ಹಾನಿ: ವರದಿ
ಸಾಂದರ್ಭಿಕ ಚಿತ್ರ Photo:PTI
ಬೆಂಗಳೂರು: ರಾಜ್ಯದಲ್ಲಿ ಪ್ರಸಕ್ತ ಮುಂಗಾರಿನಲ್ಲಿ ಅಂದರೆ ಜೂನ್ 1 ರಿಂದೀಚೆಗೆ ಮಳೆ ಸಂಬಂಧಿ ಅನಾಹುತಗಳಲ್ಲಿ ಅಂದರೆ ಮನೆಗಳು ಜಲಾವೃತಗೊಂಡಿರುವುದು, ಸಿಡಿಲು, ಮನೆ ಕುಸಿತ, ಮರ ಬಿದ್ದಿರುವುದು ಹಾಗೂ ಭೂಕುಸಿತದಂತಹ ಪ್ರಕರಣಗಳಲ್ಲಿ 38 ಮಂದಿ ಮೃತಪಟ್ಟಿದ್ದು, 35 ಮಂದಿ ಗಾಯಗೊಂಡಿದ್ದಾರೆ ಎಂದು ರಾಜ್ಯ ಸರ್ಕಾರ ಪ್ರಕಟಿಸಿದೆ.
ಒಟ್ಟು 57 ಮನೆಗಳು ಸಂಪೂರ್ಣವಾಗಿ ಹಾನಿಗೀಡಾಗಿದ್ದು, 208 ಮನೆಗಳು ತೀವ್ರ ಹಾನಿಗೊಳಗಾಗಿವೆ. 2682 ಮನೆಗಳು ಭಾಗಶಃ ಹಾನಿಗೀಡಾಗಿವೆ ಎಂದು ಸರ್ಕಾರದ ಅಂಕಿ ಅಂಶಗಳಿಂದ ತಿಳಿದುಬಂದಿದೆ. ಈ ಮಧ್ಯೆ 105 ಜಾನುವಾರುಗಳು ಮಳೆಗೆ ಬಲಿಯಾಗಿವೆ. 541.39 ಹೆಕ್ಟೇರ್ ಬೆಳೆಗೆ ಹಾನಿಯಾಗಿದ್ದು, ಇದರಲ್ಲಿ 185 ಹೆಕ್ಟೇರ್ ಕೃಷಿ ಬೆಳೆಗಳು ಹಾಗೂ 356 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಸೇರಿವೆ.
ಇದಲ್ಲದೇ 407 ಕಿಲೋಮೀಟರ್ ರಾಜ್ಯ ಹೆದ್ದಾರಿ, 1277 ಕಿಲೋಮೀಟರ್ ಜಿಲ್ಲಾ ಹೆದ್ದಾರಿ ಮತ್ತು ಗ್ರಾಮೀಣ ರಸ್ತೆಗಳು ಸೇರಿದಂತೆ 2109 ಕಿಲೋಮೀಟರ್ ರಸ್ತೆಗೆ ಹಾನಿಯಾಗಿದೆ. 189 ಸೇತುವೆಗಳು 889 ಶಾಲಾ ಕೊಠಡಿಗಳು, 8 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 269 ಅಂಗನವಾಡಿಗಳಿಗೆ ಹಾನಿಯಾಗಿದೆ ಎಂದು ಸರ್ಕಾರ ಹೇಳಿದೆ.
ರಾಜ್ಯದಲ್ಲಿ ಮಳೆ, ಹವಾಮಾನ ಹಾಗೂ ಕೃಷಿ ಚಟುವಟಿಕೆಗಳ ಪರಾಮರ್ಶೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆಗೆ ನಡೆಸಿದ ವಿಡಿಯೊ ಕಾನ್ಫರೆನ್ಸ್ ಸಭೆಯಲ್ಲಿ ಈ ಅಂಕಿ ಅಂಶಗಳನ್ನು ಅಧಿಕಾರಿಗಳು ನೀಡಿದರು. ಮಳೆ ಸಂಬಂಧಿ ಸಾವು ನೋವುಗಳನ್ನು ಮತ್ತು ಹಾನಿಯನ್ನು ತಡೆಯಲು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚನೆ ನೀಡಿದರು.