ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕುಸಿತ: ಶಾಸಕ ಹರೀಶ್ ಪೂಂಜಾ
ಬೆಳಗಾವಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2022ರಲ್ಲಿ 4943 ಮಿ.ಮಿ ಮಳೆ ಬಂದಿತ್ತು. ಆದರೆ, 2023ರಲ್ಲಿ 3126 ಮಿ.ಮಿ.ಗೆ ಇಳಿದಿದೆ. 10.43 ಮೀಟರ್ ಇದ್ದ ಅಂತರ್ಜಲ ಮಟ್ಟವು 9.20 ಮೀಟರ್ ಗೆ ಕುಸಿದಿದೆ ಎಂದು ಬಿಜೆಪಿ ಸದಸ್ಯ ಹರೀಶ್ ಪೂಂಜಾ ತಿಳಿಸಿದರು.
ಶುಕ್ರವಾರ ವಿಧಾನಸಭೆಯಲ್ಲಿ ಬರಗಾಲದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಳವೆ ಬಾವಿ ಮೂಲಕ ಲಭಿಸುವ ನೀರನ್ನು ಬಳಸಿಕೊಂಡು ಕೃಷಿ ಚಟುವಟಿಕೆಗಳನ್ನು ಮಾಡುತ್ತಿದ್ದೇವೆ. 20 ವರ್ಷಗಳ ಹಿಂದೆ 120-150 ಅಡಿ ಕೊಳವೆ ಬಾವಿಯಲ್ಲಿ ನೀರು ಸಿಗುತ್ತಿತ್ತು. ಆದರೆ, ಈಗ 900-1200 ಅಡಿ ಆಳಕ್ಕೆ ಹೋದರೆ ನೀರು ಸಿಗುವಂತಾಗಿದೆ ಎಂದರು.
ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಎತ್ತಿನಹೊಳೆ ಯೋಜನೆ ಘೋಷಣೆ ಮಾಡುವ ವೇಳೆ ಕರಾವಳಿ ಜಿಲ್ಲೆಗಳಿಗೆ ಪಶ್ಚಿಮ ವಾಹಿನಿ ಯೋಜನೆ ಘೋಷಿಸಿದರು. ನಂತರ ಬಂದ ಯಡಿಯೂರಪ್ಪ ಸರಕಾರ ಚೆಕ್ ಡ್ಯಾಂಗಳನ್ನು ನಿರ್ಮಿಸುವ ಮೂಲಕ ಅದನ್ನು ಅನುಷ್ಠಾನ ಮಾಡುವ ಪ್ರಯತ್ನ ಮಾಡಿತು ಎಂದು ಅವರು ಹೇಳಿದರು.
ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸುಮಾರು 400-500 ಚೆಕ್ ಡ್ಯಾಂಗಳನ್ನು ನಿರ್ಮಿಸಲಾಯಿತು. ಮಳೆಯ ಪ್ರಮಾಣವು ಈ ವರ್ಷ ಶೇ.40ರಷ್ಟು ಕಡಿಮೆಯಾಗಿರುವುದರಿಂದ ಅಂತರ್ಜಲ ಮಟ್ಟ ಕುಸಿದಿದೆ. ಚೆಕ್ ಡ್ಯಾಂಗಳಿಗೆ ಎರಡು ಹಲಗೆಗಳನ್ನು ಅಳವಡಿಸುವುದರಿಂದ ಅಂತರ್ಜಲ ಮಟ್ಟವನ್ನು ಹೆಚ್ಚಿಸಬಹುದು. ಇದರಿಂದ ರೈತರಿಗೂ ಅನುಕೂಲವಾಗುತ್ತದೆ ಎಂದು ಹರೀಶ್ ಪೂಂಜಾ ತಿಳಿಸಿದರು.
ಫಸಲ್ ಬೀಮಾ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ ತೋಟಗಾರಿಕೆ ಬೆಳೆಗಳಿಗೆ ಪರಿಹಾರ ಬಂದಿಲ್ಲ. ಈ ಬಗ್ಗೆ ಸರಕಾರ ಗಮನ ಹರಿಸಬೇಕು. ಜೊತೆಗೆ, ರಬ್ಬರ್ ಬೆಳೆಗಾರರು ಸಂಕಷ್ಟದಲ್ಲಿದ್ದು, ಬರದ ಪರಿಸ್ಥಿತಿಯಿಂದ ಕಂಗಾಲಾಗಿದ್ದಾರೆ. ಅವರಿಗೂ ಪರಿಹಾರ ಕೊಡಬೇಕು ಎಂದು ಹರೀಶ್ ಪೂಂಜಾ ಕೋರಿದರು.