ರಾಜ್ಯಸಭಾ ಚುನಾವಣೆಯ ಫಲಿತಾಂಶ ಪ್ರಕಟ : ಕಾಂಗ್ರೆಸ್‌ಗೆ 3 , ಬಿಜೆಪಿಗೆ 1 ಸ್ಥಾನ
ಬೆಂಗಳೂರು : ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷವು ಮೂರು ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದರೆ, ಪ್ರತಿಪಕ್ಷ ಬಿಜೆಪಿಯ ಓರ್ವ ಅಭ್ಯರ್ಥಿ ಜಯ ದಾಖಲಿಸಿದರು. ಆದರೆ, ಎನ್‍ಡಿಎ ಮೈತ್ರಿಕೂಟದ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಸೋಲುವ ಮೂಲಕ ಜೆಡಿಎಸ್ ತೀವ್ರ ಮುಖಭಂಗ ಅನುಭವಿಸಿದೆ.
ರಾಜ್ಯದ ವಿಧಾನಸಭೆಯ ಒಟ್ಟು ಸಂಖ್ಯಾಬಲ 224. ಸುರಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನದಿಂದಾಗಿ ಇದು 223ಕ್ಕೆ ಇಳಿಕೆಯಾಗಿದೆ. ಈ ಪೈಕಿ 222 ಶಾಸಕರು ತಮ್ಮ ಹಕ್ಕು ಚಲಾಯಿಸಿದರು. ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಕಾಂಗ್ರೆಸ್ ಅಭ್ಯರ್ಥಿ ಪರ ಮತಚಲಾಯಿಸಿದರೆ, ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ಮತದಾನದಿಂದ ದೂರ ಉಳಿಯುವ ಮೂಲಕ ಅಚ್ಚರಿ ಮೂಡಿಸಿದರು.
ಚಲಾವಣೆಯಾದ 222 ಮತಗಳ ಪೈಕಿ ಕಾಂಗ್ರೆಸ್ ಅಭ್ಯರ್ಥಿಗಳಾದ ಅಜಯ್ ಮಾಕನ್ -47, ಡಾ. ಸೈಯದ್ ನಾಸಿರ್ ಹುಸೇನ್-47, ಜಿ.ಸಿ.ಚಂದ್ರಶೇಖರ್-45 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ನಾರಾಯಣಸಾ ಭಾಂಡಗೆ-47 ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದರು. ಆದರೆ, ನಾಲ್ಕನೇ ಸ್ಥಾನಕ್ಕೆ ಪೈಪೋಟಿ ನೀಡಲು ಎನ್‍ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿದ ಕುಪೇಂದ್ರ ರೆಡ್ಡಿ 36 ಮತಗಳನ್ನಷ್ಟೆ ಪಡೆಯುವ ಮೂಲಕ ಸೋಲು ಅನುಭವಿಸಿದರು.
ವಿಧಾನಸಭೆಯಲ್ಲಿ 66 ಸಂಖ್ಯಾಬಲ ಹೊಂದಿರುವ ಬಿಜೆಪಿ ಪಕ್ಷವು ತನ್ನ ಅಭ್ಯರ್ಥಿ ನಾರಾಯಣಸಾ ಭಾಂಡಗೆ ಅವರಿಗೆ 47 ಮತಗಳನ್ನು ಹಾಕಿಸಿ, ಉಳಿದ 19 ಮತಗಳನ್ನು ಎನ್‍ಡಿಎ ಮೈತ್ರಿಕೂಟದ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ಹಾಕಿಸಲು ಯೋಜಿಸಲಾಗಿತ್ತು. ಆದರೆ, ಸೋಮಶೇಖರ್ ಅವರಿಂದ ಅಡ್ಡಮತದಾನ ಹಾಗೂ ಶಿವರಾಂ ಹೆಬ್ಬಾರ್ ಗೈರು ಹಾಜರಿಯಿಂದಾಗಿ ಬಿಜೆಪಿ ಬಲ 64ಕ್ಕೆ ಇಳಿಕೆಯಾಯಿತು.
ಬಿಜೆಪಿಯ ಹೆಚ್ಚುವರಿ 17 ಹೆಚ್ಚುವರಿ ಮತಗಳು ಹಾಗೂ ಜೆಡಿಎಸ್ ಪಕ್ಷದ 19 ಮತಗಳು ಸೇರಿ 36 ಮತಗಳಷ್ಟೆ ಎನ್‍ಡಿಎ ಮೈತ್ರಿಕೂಟದ ಅಭ್ಯರ್ಥಿಗೆ ಲಭ್ಯವಾದವು. ಚುನಾವಣೆಯಲ್ಲಿ ಗೆಲುವು ದಾಖಲಿಸಲು ಕನಿಷ್ಠ 45 ಮತಗಳ ಅಗತ್ಯವಿತ್ತು. ಅಗತ್ಯ ಸಂಖ್ಯಾಬಲ ಇಲ್ಲದಿದ್ದರೂ ಕುಪೇಂದ್ರ ರೆಡ್ಡಿ ಕಣಕ್ಕಿಳಿದು ಪರಾಭವಗೊಂಡಿದ್ದಾರೆ.
ಕಾಂಗ್ರೆಸ್ ‘ಕೈ’ ಹಿಡಿದ ಪಕ್ಷೇತರರು: ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪಕ್ಷೇತರ ಸದಸ್ಯರಾದ ಹರಪ್ಪನಹಳ್ಳಿ ಕ್ಷೇತ್ರ ಲತಾ ಮಲ್ಲಿಕಾರ್ಜುನ್, ಪಾಡವಪುರ ಕ್ಷೇತ್ರದ ದರ್ಶನ್ ಪುಟ್ಟಣ್ಣಯ್ಯ, ಬಾಗೇಪಲ್ಲಿ ಕ್ಷೇತ್ರದ ಪುಟ್ಟಸ್ವಾಮಿ ಗೌಡ ಹಾಗೂ ಗಂಗಾವತಿ ಕ್ಷೇತ್ರ ಜನಾರ್ದನ ರೆಡ್ಡಿ ಮತ ಚಲಾಯಿಸುವ ಮೂಲಕ ಕಾಂಗ್ರೆಸ್ ಗೆಲುವಿಗೆ ಕೊಡುಗೆ ನೀಡಿದರು.
ಎನ್‍ಡಿಎ ಮೈತ್ರಿಕೂಟಕ್ಕೆ ಎರಡನೆ ಸೋಲು: ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯಲ್ಲಿ ಎನ್‍ಡಿಎ ಮೈತ್ರಿಕೂಟದ ಅಭ್ಯರ್ಥಿ ಎ.ಪಿ.ರಂಗನಾಥ್ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ವಿರುದ್ಧ ಸೋಲು ಅನುಭವಿಸಿದ್ದರು. ಇದೀಗ ರಾಜ್ಯಸಭೆ ಚುನಾವಣೆಯಲ್ಲಿ ಕುಪೇಂದ್ರ ರೆಡ್ಡಿ ಪರಾಭವಗೊಳ್ಳುವ ಮೂಲಕ ಲೋಕಸಭಾ ಚುನಾವಣೆಗೆ ಮುನ್ನ ಎನ್‍ಡಿಎ ಮೈತ್ರಿಕೂಟ ಎರಡನೆ ಸೋಲು ಅನುಭವಿಸುವಂತಾಗಿದೆ.
ರಾಜ್ಯಸಭೆಯ 4 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜಯಗಳಿಸಿರುವ ಕಾಂಗ್ರೆಸ್ ಅಭ್ಯರ್ಥಿಗಳಾದ ಅಜಯ್ ಮಾಕನ್, ನಾಸಿರ್ ಹುಸೇನ್ ಹಾಗೂ ಜಿ.ಸಿ. ಚಂದ್ರಶೇಖರ್ ಅವರಿಗೆ ಅಭಿನಂದನೆಗಳು. ತೆರಿಗೆ ಪಾಲು ಕಡಿತ, ವಿಶೇಷ ಅನುದಾನ ನಿರಾಕರಣೆ, ಅಭಿವೃದ್ಧಿ ಯೋಜನೆಗಳಿಗೆ ದೊರಕದ ಅನುದಾನ ಸೇರಿದಂತೆ ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ರಾಜ್ಯಸಭೆಯಲ್ಲಿ ಧ್ವನಿಯೆತ್ತಿ, ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡಲು ಶ್ರಮಿಸುತ್ತೀರೆಂದು ಭಾವಿಸಿದ್ದೇನೆ. ತಮ್ಮೆಲ್ಲರ ಗೆಲುವು ನಾಡಿನ ನ್ಯಾಯದ ಕೂಗಿಗೆ ಬಲ ತಂದಿದೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ
ನಮ್ಮ ಅಭ್ಯರ್ಥಿ ನಾರಾಯಣಸಾ ಭಾಂಡಗೆ ಗೆಲುವು ಸಾಧಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯಸಭೆಯಲ್ಲಿ ಕರ್ನಾಟಕದ ಪರವಾಗಿ ಧ್ವನಿ ಎತ್ತುವ ಮೂಲಕ ಕನ್ನಡ ನಾಡಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಹೊಸ ಸರಕಾರ ಅಧಿಕಾರಕ್ಕೆ ಬಂದಿದ್ದರೂ ಅಭಿವೃದ್ಧಿ ಇಲ್ಲದೆ ಆಡಳಿತ ಪಕ್ಷದ ಶಾಸಕರೇ ತಮ್ಮ ಕ್ಷೇತ್ರದಲ್ಲಿ ಓಡಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅವರಲ್ಲಿ ಕೆಲವರು ನಮಗೆ ಬೆಂಬಲ ನೀಡಬಹುದು ಎಂಬ ನಿರೀಕ್ಷೆಯಿಂದ ಮೈತ್ರಿ ಅಭ್ಯರ್ಥಿ ಕಣಕ್ಕಿಳಿದಿದ್ದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಕೂಟ 28 ಕ್ಷೇತ್ರಗಳಲ್ಲೂ ಗೆಲುವು ದಾಖಲಿಸಿ ಸರಕಾರಕ್ಕೆ ಉತ್ತರ ನೀಡುತ್ತೇವೆ.
ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ