ರಾಜ್ಯಸಭಾ ಚುನಾವಣೆ: ಜೆಡಿಎಸ್ ನ ಕುಪೇಂದ್ರ ರೆಡ್ಡಿ ಕಣಕ್ಕೆ
ಬೆಂಗಳೂರು, ಫೆ.15: ರಾಜ್ಯಸಭಾ ಚುನಾವಣೆಗೆ ಐದನೇ ಅಭ್ಯರ್ಥಿಯಾಗಿ ಜೆಡಿಎಸ್ ನ ಕುಪೇಂದ್ರ ರೆಡ್ಡಿ ಕಣಕ್ಕಿಳಿದಿದ್ದು, ಇಂದು ನಾಮಪತ್ರ ಸಲ್ಲಿಸಿದ್ದಾರೆ.
ಕುಪೇಂದ್ರ ರೆಡ್ಡಿ ವಿಧಾನಸೌಧದ ಕೊಠಡಿ ಸಂಖ್ಯೆ 121ರಲ್ಲಿ ವಿಧಾನಸಭೆಯ ಕಾರ್ಯದರ್ಶಿಯವರಿಗೆ ಇಂದು ನಾಮಪತ್ರ ಸಲ್ಲಿಸಿದರು.
ಈ ಸಂದರ್ಭ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಉಪಸ್ಥಿತರಿದ್ದರು.
ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಸುತ್ತಿದ್ದಾರೆ ಎಂದರೆ ಜೆಡಿಎಸ್ ಕಾರ್ಯತಂತ್ರಗಳು ಇದ್ದೇ ಇರುತ್ತವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಜೆಡಿಎಸ್ ಪಕ್ಷ ಎನ್ಡಿಎ ಕೂಟಕ್ಕೆ ಸೇರಿದ ನಂತರ ಯಾವುದೇ ಹೋರಾಟ ಮತ್ತು ತೀರ್ಮಾನಗಳನ್ನು ಜಂಟಿಯಾಗಿಯೇ ತೆಗೆದುಕೊಳ್ಳುತ್ತಿದ್ದೇವೆ. ನಿನ್ನೆ ನಮ್ಮ ಕೇಂದ್ರದ ವರಿಷ್ಠರು ಮತ್ತು ಜೆಡಿಎಸ್ ನ ರಾಜ್ಯದ ಹಿರಿಯರು ಚರ್ಚೆ ಮಾಡಿ ರಾಜ್ಯಸಭೆಗೆ 5ನೇ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿಯವರನ್ನು ಕಣಕ್ಕೆ ಇಳಿಸಲು ನಿರ್ಧರಿಸಿದ್ದಾಗಿ ವಿವರಿಸಿದರು.
ಬಿಜೆಪಿ- ಜೆಡಿಎಸ್ ಒಟ್ಟಾಗಿ ನಮ್ಮ ಅಭ್ಯರ್ಥಿ ಗೆಲ್ಲುವ ದೃಷ್ಟಿಯಿಂದ ತಂತ್ರಗಾರಿಕೆಯನ್ನು ಮುಂದಿನ ದಿನಗಳಲ್ಲಿ ರೂಪಿಸಲಿದ್ದೇವೆ. ಬೇಕಾದ ಹೆಚ್ಚುವರಿ ಮತಗಳ ಕುರಿತು ಚರ್ಚಿಸುತ್ತೇವೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.