ಫೆ. 27ರಂದು ರಾಜ್ಯಸಭಾ ಚುನಾವಣೆ: ಬಿರುಸುಗೊಂಡ ರಾಜಕೀಯ ಚಟುವಟಿಕೆ
ಬಿಜೆಪಿ ಜತೆ ಮಾತುಕತೆ ನಡೆಸಿದ ಬಳಿಕ ರಿಯಲ್ ಎಸ್ಟೇಟ್ ಉದ್ಯಮಿ ಡಿ.ಕುಪೇಂದ್ರ ರೆಡ್ಡಿಯವರನ್ನು ಕಣಕ್ಕಿಳಿಸಿದ ಜೆಡಿಎಸ್
ಬೆಂಗಳೂರು: ಕರ್ನಾಟಕದಿಂದ ರಾಜ್ಯಸಭೆಗೆ ಸದಸ್ಯರನ್ನು ಆಯ್ಕೆ ಮಾಡುವ ಚುನಾವಣೆ ಈ ತಿಂಗಳ 27ರಂದು ನಡೆಯಲಿದ್ದು, ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ವರದಿಯಾಗಿದೆ.
ಮೂವರು ಅಭ್ಯರ್ಥಿಗಳನ್ನು ರಾಜ್ಯಸಭೆಗೆ ಕಳುಹಿಸಲು ಅಗತ್ಯವಿರುವ ಸಂಖ್ಯೆಯನ್ನು ಕಾಂಗ್ರೆಸ್ ಹೊಂದಿದ್ದು, ಬಿಜೆಪಿಯು ಒಬ್ಬ ಸದಸ್ಯನನ್ನು ಸುಲಭವಾಗಿ ಕಳುಹಿಸಬಹುದಾಗಿದೆ. ಆದರೆ ಜಾತ್ಯತೀತ ಜನತಾದಳ ಇಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದು, ಗೆಲುವಿಗಾಗಿ ಕಾಂಗ್ರೆಸ್ ಹಾಗೂ ಪಕ್ಷೇತರರ ಬೆಂಬಲ ಪಡೆಯುವುದು ಅನಿವಾರ್ಯವಾಗಿದೆ.
ಬಿಜೆಪಿ ಜತೆ ಮಾತುಕತೆ ನಡೆಸಿದ ಬಳಿಕ ರಿಯಲ್ ಎಸ್ಟೇಟ್ ಉದ್ಯಮಿ ಡಿ.ಕುಪೇಂದ್ರ ರೆಡ್ಡಿಯವರನ್ನು ಜೆಡಿಎಸ್ ಕಣಕ್ಕಿಳಿಸಿದೆ. 135 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಯಾವುದೇ ಅಡೆತಡೆ ಇಲ್ಲದೇ ಮೂರು ಸ್ಥಾನಗಳನ್ನು ಗೆಲ್ಲಬಹುದಾಗಿದೆ. ಬಿಜೆಪಿ 66 ಸದಸ್ಯರನ್ನು ಹೊಂದಿದ್ದು, ತನ್ನ ಅಭ್ಯರ್ಥಿ ನಾರಾಯಣ ಭಾಂಡಗೆಯವರಿಗಾಗಿ 45 ಮತಗಳನ್ನು ಬಳಸಿಕೊಳ್ಳಲಿದೆ. ಬಿಜೆಪಿ ಬಳಿ 21 ಮತಗಳು ಉಳಿಯಲಿದ್ದು, ಜೆಡಿಎಸ್ 19 ಶಾಸಕರನ್ನು ಹೊಂದಿದೆ. ರೆಡ್ಡಿ ಐದು ಮತಗಳಿಗಾಗಿ ಹೋರಾಟ ನಡೆಸಬೇಕಾಗುತ್ತದೆ.
ಸೋಮವಾರ ವಿಧಾನಸಭಾ ಅಧಿವೇಶನ ಮುಕ್ತಾಯದ ಬಳಿಕ ರಾಜ್ಯಸಭೆ ಚುನಾವಣೆ ಮುಗಿಯುವವರೆಗೂ ಎಲ್ಲ ಶಾಸಕರನ್ನು ಬೆಂಗಳೂರಿನ ಹೋಟೆಲ್ ನಲ್ಲಿ ಇರಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ.
ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರು ಜೆಡಿಎಸ್-ಬಿಜೆಪಿಯ ಐದನೇ ಅಭ್ಯರ್ಥಿಯ ಪರವಾಗಿ ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಹಿರಂಗಪಡಿಸಿದ್ದರು. ಯಾರನ್ನು ಯಾರು ಸಂಪರ್ಕಿಸುತ್ತಿದ್ದಾರೆ ಹಾಗೂ ಹೇಗೆ ಬೆದರಿಕೆ ಹಾಕುತ್ತಿದ್ದಾರೆ ಎನ್ನುವುದು ನಮಗೆ ತಿಳಿದಿದೆ. ಯಾವ ಆಫರ್ ಗಳನ್ನು ನೀಡುತ್ತಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ. ಬಿಜೆಪಿ-ಜೆಡಿಎಸ್ ಪ್ಲಾನ್ ಮಾಡುತ್ತಿದ್ದು, ನಾವು ನಮ್ಮ ಕಾರ್ಯತಂತ್ರ ಅನುಸರಿಸುತ್ತೇವೆ ಎಂದು ಡಿಕೆಶಿ ಹೇಳಿದ್ದಾರೆ.
ಪ್ರತಿ ಅಭ್ಯರ್ಥಿಗೆ ಮತ ಚಲಾಯಿಸಬೇಕಾದ ಶಾಸಕರ ಹೆಸರನ್ನು ಪಟ್ಟಿ ಮಾಡಲಾಗುತ್ತಿದೆ ಎಂದು ಶನಿವಾರ ರಾಜ್ಯ ಗೃಹಸಚಿವ ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.