ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟುಗೆ ರಾಜ್ಯೋತ್ಸವ ಪ್ರಶಸ್ತಿ
ದಿನೇಶ್ ಅಮಿನ್ ಮಟ್ಟು
ಬೆಂಗಳೂರು, ಅ 31 : ಖ್ಯಾತ ಪತ್ರಕರ್ತ, ಲೇಖಕ, ಚಿಂತಕ ದಿನೇಶ್ ಅಮಿನ್ ಮಟ್ಟು ಅವರು ಈ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ದಶಕಗಳ ಕಾಲ ರಾಜ್ಯದ ಉದ್ದಗಲಗಳಲ್ಲಿ ,ದೇಶದ ವಿವಿಧೆಡೆಗಳಲ್ಲಿ ಹಾಗು ವಿದೇಶದಲ್ಲೂ ವರದಿಗಾರಿಕೆ ಮಾಡಿರುವ ದಿನೇಶ್ ಅಮಿನ್ ಮಟ್ಟು ಅವರು ಕಳೆದೊಂದು ದಶಕದಲ್ಲಿ ರಾಜ್ಯದ ಪ್ರಮುಖ ಲೇಖಕ, ವಿಶ್ಲೇಷಕ, ವಾಗ್ಮಿ ಹಾಗು ಚಿಂತಕರಾಗಿ ಗುರುತಿಸಲ್ಪಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಧ್ಯಮ ಸಲಹೆಗಾರರಾಗಿಯೂ ಅವರು ಕರ್ತವ್ಯ ನಿರ್ವಹಿಸಿದ್ದಾರೆ. ಅದಕ್ಕೂ ಮೊದಲು ಸುಮಾರು ಒಂದು ದಶಕ ದಿಲ್ಲಿಯಲ್ಲಿ ಪ್ರಜಾವಾಣಿ ಪ್ರತಿನಿಧಿಯಾಗಿದ್ದ ಅವರು ತಮ್ಮ ನೂರಾರು ರಾಜಕೀಯ ವರದಿಗಳು, ಸಮೀಕ್ಷೆಗಳು ಹಾಗು ವಿಶ್ಲೇಷಣೆಗಳಿಂದ ಖ್ಯಾತಿ ಗಳಿಸಿದ್ದರು. ಉತ್ತರ ಭಾರತದ ಹಲವು ರಾಜ್ಯಗಳಿಗೆ ಚುನಾವಣಾ ವರದಿಗಾರಿಕೆಗೆ ತೆರಳಿ ಗ್ರೌಂಡ್ ರಿಪೋರ್ಟ್ ಗಳನ್ನು , ಕರಾರುವಾಕ್ ಸಮೀಕ್ಷೆಗಳನ್ನು ನೀಡಿದ್ದಾರೆ. ಪ್ರಜಾವಾಣಿಯ ಅವರ ದೆಹಲಿ ನೋಟ ಅಂಕಣಕ್ಕೆ ಅಪಾರ ಸಂಖ್ಯೆಯ ಓದುಗರಿದ್ದರು.
ಅಪ್ಪಟ ಜಾತ್ಯತೀತ ಧೋರಣೆ, ಕೋಮುವಾದದ ಕಟ್ಟಾ ವಿರೋಧಿ, ಪ್ರಗತಿಪರ ಚಟುವಟಿಕೆಗಳ ಬೆಂಬಲಿಗನಾಗಿ ಸಕ್ರಿಯವಾಗಿರುವ ದಿನೇಶ್ ಅಮಿನ್ ಮಟ್ಟು ಅವರು ಅದಕ್ಕಾಗಿ ಹಲವಾರು ಬಾರಿ ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಟೀಕೆ, ಟಿಪ್ಪಣಿ , ಬೆದರಿಕೆಗೂ ಒಳಗಾಗಿದ್ದಾರೆ. ರಾಜ್ಯದ ಪ್ರಗತಿಪರ, ಜಾತ್ಯತೀತ ನಿಲುವಿನ ಯುವಜನರು, ಪತ್ರಕರ್ತರು ಹಾಗು ಸಾಮಾಜಿಕ ಕಾರ್ಯಕರ್ತರ ಪಾಲಿನ ಫ್ರೆಂಡ್, ಫಿಲಾಸಫರ್ ಹಾಗು ಗೈಡ್ ಎಂದೇ ದಿನೇಶ್ ಚಿರಪರಿಚಿತರು. ಬರಹಕ್ಕೆ ಮಾತ್ರ ಸೀಮಿತವಾಗದೆ ರಾಜ್ಯದಲ್ಲಿ ಕೋಮುವಾದದ ವಿರುದ್ಧ ಹತ್ತು ಹಲವು ಚಳವಳಿಗಳಲ್ಲಿ, ಪ್ರತಿಭಟನೆಗಳಲ್ಲಿ ಮುಂಚೂಣಿಯಲ್ಲಿದ್ದು ಹೋರಾಡಿದವರು ದಿನೇಶ್ ಅಮಿನ್ ಮಟ್ಟು.
ದಿನೇಶ್ ಅಮಿನ್ ಮಟ್ಟು ಅವರು 39 ವರ್ಷಗಳ ಕಾಲ ಮುದ್ರಣ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ಮಟ್ಟು ಮೂಲದ ದಿನೇಶ್ ಬಿಕಾಂ, ಎಲ್.ಎಲ್.ಬಿ.ಪದವೀಧರು. 1983ರಲ್ಲಿ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಸಂಪಾದಕತ್ವದ ‘ಮುಂಗಾರು’ ದಿನಪತ್ರಿಕೆಯ ಮೂಲಕ ಪತ್ರಿಕಾ ವೃತ್ತಿಜೀವನ ಆರಂಭಿಸಿದ್ದರು. 1989ರಿಂದ 2013ರವರೆಗೆ ಅತೀ ದೀರ್ಘಕಾಲ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. 2013ರಿಂದ 2018ರವರೆಗೆ 5 ವರ್ಷಗಳ ಕಾಲ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರರಾಗಿದ್ದರು. 2010ರಲ್ಲಿ ಜಿ-20 ದೇಶಗಳ ಸಮಾವೇಶದಲ್ಲಿ ಭಾಗವಹಿಸಲು ದಕ್ಷಿಣ ಕೋರಿಯಾಗೆ ಪ್ರವಾಸ ಕೈಗೊಂಡಿದ್ದ ಅಮಿನ್ ಮಟ್ಟು ಅವರು, ಮಾಜಿ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಅವರು ರಚಿಸಿದ್ದ ಲೋಕಸಭಾ ಮಾಧ್ಯಮ ಸಲಹೆಗಾರರ ಸಮಿತಿ ಸದಸ್ಯರಾಗಿ, ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಅಧ್ಯಯನ ಮಂಡಳಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅವರು ಸಂಪಾದಿಸಿರುವ ದಿವಂಗತ ವಡ್ಡರ್ಸೆ ರಘುರಾಮ ಶೆಟ್ಟರ ಬರಹಗಳ ಪುಸ್ತಕ 'ಬೇರೆಯೇ ಮಾತು' ಕಳೆದ ವರ್ಷ ಪ್ರಕಟವಾಗಿದೆ. ರಾಜಕೀಯ, ಸಾಮಾಜಿಕ ಚಿಂತನೆಗಳ ಅವರ ನೂರಾರು ಲೇಖನಗಳು ನಾಡಿನ ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ.