ರಾಜ್ಯೋತ್ಸವ ಪ್ರಶಸ್ತಿ 2023 | ಪಟ್ಟಿಯಲ್ಲಿ ವಿಜ್ಞಾನಿ, ಪತ್ರಿಕಾ ವಿತರಕ ಸಹಿತ ವಿವಿಧ ಕ್ಷೇತ್ರಗಳ ಸಾಧಕರು
ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್ | ಪತ್ರಿಕಾ ವಿತರಕ ಜವರಪ್ಪ
ಬೆಂಗಳೂರು ಅ 31: 68 ಮಂದಿ ಸಾಧಕರು ಮತ್ತು 10 ಕನ್ನಡ ಪರ ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ.
ಸಂಗೀತ-ನೃತ್ಯ, ಚಲನಚಿತ್ರ, ರಂಗಭೂಮಿ, ಶಿಲ್ಪಕಲೆ/ಚಿತ್ರಕಲೆ/ಕರಕುಶಲ, ಜಾನಪದ, ಸಮಾಜಸೇವೆ, ಆಡಳಿತ, ವೈದ್ಯಕೀಯ, ಸಾಹಿತ್ಯ, ಶಿಕ್ಷಣ, ಕ್ರೀಡೆ, ನ್ಯಾಯಾಂಗ, ಪರಿಸರ, ಸಂಕೀರ್ಣ, ಮಾಧ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ, ಹೊರನಾಡು, ಸ್ವಾತಂತ್ರ್ಯ ಹೋರಾಟಗಾರರು ಹೀಗೆ 18 ಕ್ಷೇತ್ರಗಳಲ್ಲಿ ಒಟ್ಟು 68 ಮಂದಿ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ.
ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್ ಅವರಿಗೂ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ. ಅದೇ ರೀತಿ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪತ್ರಿಕಾ ವಿತರಕರನ್ನೂ ರಾಜ್ಯೋತ್ಸವ ಪ್ರಶಸ್ತಿಗಾಗಿ ಪರಿಗಣಿಸಿ ಗೌರವಿಸಲಾಗಿದೆ.
ಮಾಧ್ಯಮ ಕ್ಷೇತ್ರದ ಅವಿಭಾಜ್ಯ ಅಂಗವಾಗಿರುವ ಪತ್ರಿಕಾ ವಿತರಕಾ ಸಮುದಾಯದಿಂದ ಜವರಪ್ಪ ಅವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಇಡೀ ವಿತರಕ ಸಮುದಾಯವನ್ನು, ಈ ಸಮುದಾಯದ ಕಾರ್ಯಕ್ಷಮತೆ ಮತ್ತು ಶ್ರಮವನ್ನು ರಾಜ್ಯ ಸರ್ಕಾರ ಮತ್ತು ಆಯ್ಕೆ ಸಮಿತಿ ಗುರುತಿಸಿದೆ, ಗೌರವಿಸಿದೆ.
ತುಮಕೂರಿನಲ್ಲಿ ಇತ್ತೀಚಿಗೆ ಜರುಗಿದ ಪತ್ರಿಕಾ ವಿತರಕರ ರಾಜ್ಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ್ದ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು, "ರಾಜ್ಯ ಸರ್ಕಾರದ ಪ್ರಶಸ್ತಿಗಳಲ್ಲಿ ಪತ್ರಿಕಾ ವಿತರಕರನ್ನೂ ಪರಿಗಣಿಸಲಾಗುವುದು" ಎನ್ನುವ ಭರವಸೆ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ʼʼ100 ವರ್ಷ ದಾಟಿದ ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿʼʼ
ʼ2023ನೇ ಸಾಲಿನಲ್ಲಿ 68 ಜನರಿಗೆ ವೈಯಕ್ತಿಕ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿಯ ಆಯ್ಕೆಯಲ್ಲಿ ಎಲ್ಲ ಜಿಲ್ಲೆಗಳಿಗೆ ಪ್ರಾತಿನಿದ್ಯ ನೀಡಲಾಗಿದೆ. ಕರ್ನಾಟಕ ಸಂಭ್ರಮ-50ರ ಪ್ರಯುಕ್ತ ವಿಶೇಷವಾಗಿ 10 ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆʼ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ʼ100 ವರ್ಷ ದಾಟಿದ ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಒಬ್ಬರು ದಾವಣಗೆರೆ ಹಾಗೂ ಒಬ್ಬರು ಉತ್ತರ ಕನ್ನಡ ಜಿಲ್ಲೆಯವರು. 13 ಮಹಿಳೆಯರು ಮತ್ತು 54 ಪುರುಷರು ಹಾಗೂ ಮತ್ತು ಒಬ್ಬರು ಮಂಗಳ ಮುಖಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಗೆ ಆಯ್ಕೆಯಾದವರಿಗೆ ರೂ 5 ಲಕ್ಷ ನಗದು ಹಾಗೂ 25 ಗ್ರಾಂ ಚಿನ್ನದ ಪದಕ ವಿತರಿಸಲಾಗುವುದುʼ ಎಂದು ಸಚಿವ ತಂಗಡಗಿ ತಿಳಿಸಿದರು.