ಸರಕಾರಿ ಶಾಲೆಗೆ ಭೂಮಿ ಕೊಟ್ಟ ಅಜ್ಜಿ ಹುಚ್ಚಮ್ಮಗೆ ರಾಜ್ಯೋತ್ಸವ ಪ್ರಶಸ್ತಿ
ಹುಚ್ಚಮ್ಮ ಬಸಪ್ಪ ಚೌದ್ರಿ
ಕೊಪ್ಪಳ: 68 ಮಂದಿ ಸಾಧಕರು ಮತ್ತು 10 ಕನ್ನಡ ಪರ ಸಂಘ ಸಂಸ್ಥೆಗಳಿಗೆ 2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದ್ದು, ತನ್ನ ಜೀವನಕ್ಕಾಗಿ ಇದ್ದ 2 ಎಕರೆ ಭೂಮಿಯನ್ನು ತನ್ನೂರಿನ ಶಾಲೆಗೆ ದಾನ ಮಾಡಿ, ಮಕ್ಕಳ ಉಜ್ವಲ ಭವಿಷ್ಯಕ್ಕೆ ನೆರವಾಗಿದ್ದ ಹುಚ್ಚಮ್ಮ ಬಸಪ್ಪ ಚೌದ್ರಿ ಅವರಿಗೂ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಕುಣಿಕೇರಿ ಗ್ರಾಮದಲ್ಲಿ ಸರಕಾರಿ ಶಾಲೆ ನಿರ್ಮಾಣ ಮಾಡಲಿಕ್ಕೆ ಭೂಮಿ ದಾನ ಮಾಡಿದ್ದ ಹುಚ್ಚಮ್ಮ ಅವರು ಪ್ರಶಸ್ತಿಗಾಗಿ ಅರ್ಜಿ ಸಹ ಹಾಕಿರಲಿಲ್ಲ. ಅವರಿಗೆ ಈಗ 75 ವರ್ಷ ವಯಸ್ಸು
ಕುಣಿಕೇರಿ ಗ್ರಾಮದಲ್ಲಿರುವ ಶಾಲೆಗೆ ಹೊಸ ಕಟ್ಟಡ ನಿರ್ಮಿಸಬೇಕಾಗಿತ್ತು. ಅದಕ್ಕಾಗಿ ಭೂಮಿ ಅವಶ್ಯಕತೆ ಇತ್ತು. ಆದರೆ, ಊರಿನಲ್ಲಿ ಜಮೀನು ನೀಡುವವರು ಯಾರೂ ಇರಲಿಲ್ಲ. ಆದರೆ, ಹುಚ್ಚಮ್ಮ ತನ್ನೂರಿನ ಶಾಲಾ ಮಕ್ಕಳಿಗೆ ಮೊದಲು ಒಂದು ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದರು. ಅದಾದ ಬಳಿಕ ಮೈದಾನಕ್ಕಾಗಿ ಮತ್ತೊಂದು ಎಕರೆ ಭೂಮಿಯನ್ನು ಕೂಡ ದಾನ ಮಾಡಿದ್ದಾರೆ. ಈಗ ಇದೇ ಭೂಮಿಯಲ್ಲಿ ಸುಸಜ್ಜಿತ ಶಾಲೆ ನಿರ್ಮಾಣವಾಗಿದೆ. ತನ್ನ ಜೀವನೋಪಾಯಕ್ಕಾಗಿ ಅದೇ ಶಾಲೆಯಲ್ಲಿ ಹುಚ್ಚಮ್ಮ ಬಿಸಿಯೂಟದ ಮುಖ್ಯ ಅಡುಗೆದಾರರಾಗಿ ಕೆಲಸ ಮಾಡುತ್ತಿದ್ದಾರೆ.
ಪ್ರಶಸ್ತಿ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಹುಚ್ಚಮ್ಮ ʼʼನನಗೆ ಮಾಧ್ಯಮದ ಮೂಲಕವೇ ಪ್ರಶ್ತಿ ಬಗ್ಗೆ ತಿಳಿಯಿತು. ನನ್ನನ್ನು ಸರಕಾರ ಗುರುತಿಸಿ ಪ್ರಶಸ್ತಿ ಕೊಡುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಬಹಳಷ್ಟು ಸಂತೋಷವಾಗಿದೆʼʼ ಎಂದು ಖುಷಿಪಟ್ಟರು.
ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ನಾಡಿನ ಎಲ್ಲ ಗಣ್ಯರಿಗೆ ಅಭಿನಂದನೆಗಳು. ವಿವಿಧ ಕ್ಷೇತ್ರಗಳಲ್ಲಿ ತಾವು ಸಲ್ಲಿಸಿದ ಅನನ್ಯ ಸೇವೆ ಮತ್ತು ಸಾಧನೆ ಸಮಾಜದ ಯುವಮನಸ್ಸುಗಳಿಗೆ ಮಾದರಿಯಾಗಲಿ ಎಂದು ಹಾರೈಸುತ್ತೇನೆ.
— CM of Karnataka (@CMofKarnataka) October 31, 2023
- ಮುಖ್ಯಮಂತ್ರಿ @siddaramaiah#ರಾಜ್ಯೋತ್ಸವಪ್ರಶಸ್ತಿ2023 pic.twitter.com/MLwjBVI9y0