ರಾಮ ಮಂದಿರ ಯಾವ ಪಕ್ಷಕ್ಕೂ ಸೇರಿದ್ದಲ್ಲ: ಆರ್. ಅಶೋಕ್
ವಿಪಕ್ಷ ನಾಯಕ ಆರ್. ಅಶೋಕ್
ಬೆಂಗಳೂರು: ಶ್ರೀರಾಮ ಮಂದಿರ ಯಾವ ಪಕ್ಷಕ್ಕೂ ಸೇರಿದ್ದಲ್ಲ. ಮಂದಿರ ಉದ್ಘಾಟನೆಗೆ ಎಲ್ಲರಿಗೂ ಆಹ್ವಾನ ಕೊಡಬೇಕೆಂದು ನಿರೀಕ್ಷೆ ಮಾಡಬೇಕಿಲ್ಲ. ಆದರೆ ಆಹ್ವಾನವಿಲ್ಲ ಎಂದು ಹೇಳುವ ಕಾಂಗ್ರೆಸ್ ನಾಯಕರು ಒಂದು ಕಾಲದಲ್ಲಿ ಶ್ರೀರಾಮ ಕಾಲ್ಪನಿಕ ವ್ಯಕ್ತಿ ಎಂದಿದ್ದರು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಐನೂರು ವರ್ಷಗಳಿಂದ ಹೋರಾಟ ನಡೆಯುತ್ತಿತ್ತು. ಆಗ ಬಿಜೆಪಿ ಇರಲಿಲ್ಲ. ಇದು ಎಲ್ಲ ರಾಮಭಕ್ತರಿಗೆ ಸೇರಿದೆ. ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ದೇವಸ್ಥಾನದ ಉದ್ಘಾಟನೆಗೆ ಹೋಗಿದ್ದು, ಪೂಜೆ ಮಾಡಲು ಒಳಗೆ ಹೋಗಿಲ್ಲ. ಆದರೆ ಮಸೀದಿಗೆ ಕರೆದರೆ ಟೋಪಿ ಹಾಕಿಕೊಂಡು ಓಡುತ್ತಾರೆ. ಕೇಸರಿ ಪೇಟವನ್ನು ಹಾಕಿಕೊಳ್ಳುವುದಿಲ್ಲ. ಕಾಂಗ್ರೆಸ್ ನಾಯಕರು ರಾಮನ ಜನ್ಮ ಪ್ರಮಾಣಪತ್ರ ಕೇಳಿದ್ದರು, ರಾಮ ಕಾಲ್ಪನಿಕ ವ್ಯಕ್ತಿ ಎಂದು ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದರು ಎಂದು ಟೀಕಿಸಿದರು.
ಕರಸೇವಕ ಶ್ರೀಕಾಂತ್ ಪೂಜಾರಿ ವಿರುದ್ಧ ಬೇರೆ ಪ್ರಕರಣಗಳಿವೆ ಎಂದು ಹೇಳುತ್ತಾ ಸಿಎಂ ಸಿದ್ದರಾಮಯ್ಯ ಅಮಾಯಕರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದ್ದಾರೆ. ಬೇರೆ ಪ್ರಕರಣಗಳಲ್ಲಿ ಯಾರೂ ಸಿಗದಿದ್ದಾಗ ಶ್ರೀಕಾಂತ್ ಮೇಲೆ ಪ್ರಕರಣ ದಾಖಲಿಸಲಾಗಿದೆ. ಶ್ರೀಕಾಂತ್ ಗಾಯಗೊಂಡಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅವರನ್ನು ಬಂಧಿಸುವ ಅವಶ್ಯಕತೆ ಏನಿತ್ತು? ಎಂದು ಅವರು ಪ್ರಶ್ನಿಸಿದರು.
ದೀರ್ಘಾವಧಿಯಿಂದ ಬಾಕಿ ಇರುವ ಸುಮಾರು 50-60ಸಾವಿರ ಹಾಗೂ ಬೆಂಗಳೂರಿನಲ್ಲಿ 10 ಸಾವಿರ ಪ್ರಕರಣಗಳಿವೆ. ಎಲ್ಲರನ್ನೂ ಬಂಧಿಸಿದರೆ ಜೈಲಿನಲ್ಲಿರಿಸಲು ಜಾಗ ಇರುವುದಿಲ್ಲ. ಕಾಂಗ್ರೆಸ್ನವರು ತಮಗೆ ಬೇಕಾದವರಿಗೆ ಕಾಫಿ ಕೊಟ್ಟು ಕಳಿಸುತ್ತಾರೆ. ಶ್ರೀಕಾಂತ್ ಪೂಜಾರಿಯನ್ನು ಕ್ರಿಮಿನಲ್ ಎನ್ನುವುದಾದರೆ ಸೋನಿಯಾ, ರಾಹುಲ್, ಡಿ.ಕೆ.ಶಿವಕುಮಾರ್, ಶಶಿ ತರೂರ್ ಯಾವ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಅಶೋಕ್ ಪ್ರಶ್ನಿಸಿದರು.
ಶ್ರೀಕಾಂತ್ ಪೂಜಾರಿಗೆ ಸಂಬಂಧಪಟ್ಟ ಪ್ರಕರಣದಲ್ಲಿ ಇತರರು ಅಪರಾಧಿಯಲ್ಲ, ದಾಖಲೆಯೂ ಇಲ್ಲ ಎಂದು ಆದೇಶ ಬಂದಿದೆ. ಶ್ರೀಕಾಂತ್ಗೆ ಕಾನೂನು ನೆರವು ಪಡೆಯಲು ಅವಕಾಶ ನೀಡಿಲ್ಲ. ತಲೆಮರೆಸಿಕೊಂಡಿದ್ದಾನೆ ಎಂದು ಮನೆಯ ಬಾಗಿಲಿಗೆ ಅಂಟಿಸಿದ ನೋಟಿಸ್ ಅಥವಾ ಎಫ್ಐಆರ್ ಪ್ರತಿ ತೋರಿಸಿ ಎಂದು ಅಶೋಕ್ ಸವಾಲು ಹಾಕಿದರು.