ಒಂದೂವರೆ ವರ್ಷದಲ್ಲಿ ಸಾರಿಗೆ ನಿಗಮಗಳಿಗೆ 4,301 ಹೊಸ ಬಸ್ ಸೇರ್ಪಡೆ : ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು : ನಮ್ಮ ಸರಕಾರವು ಸಾರಿಗೆ ನಿಗಮಗಳಿಗೆ 5,800 ಹೊಸ ಬಸ್ಸುಗಳ ಸೇರ್ಪಡೆಗೆ ಅನುಮೋದನೆ ನೀಡಿದ್ದು, ಈ ಪೈಕಿ ನಾಲ್ಕು ನಿಗಮಗಳಲ್ಲಿ ಒಂದೂವರೆ ವರ್ಷದಲ್ಲಿ 4,301 ಬಸ್ಸುಗಳನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಮಂಗಳವಾರ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ನಿಗಮದ 20 ಅಂಬಾರಿ ಉತ್ಸವ ಸ್ಲೀಪರ್ ಬಸ್ಸುಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಾಲ್ಕು ನಿಗಮಗಳಲ್ಲಿ 9ಸಾವಿರ ಹುದ್ದೆಗಳ ನೇಮಕಾತಿಗೆ ನಮ್ಮ ಸರಕಾರವು ಅನುಮತಿ ನೀಡಿದ್ದು, ಈ ಪೈಕಿ 2,144 ಚಾಲಕ ಕಂ ನಿರ್ವಾಹಕ, ತಾಂತ್ರಿಕ ಸಿಬ್ಬಂದಿ ಹಾಗೂ ಆಡಳಿತ ಸಿಬ್ಬಂದಿಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ. 6,856 ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆ ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದರು.
ಇದುವರೆಗೂ ಶಕ್ತಿ ಯೋಜನೆ ನಿಗಮಗಳ ವಾಹನಗಳಲ್ಲಿ 356 ಕೋಟಿಯಷ್ಟು ಮಹಿಳೆಯರು ಪ್ರಯಾಣಿಸಿದ್ದು, ಅವರ ಪ್ರಯಾಣದ ಶೂನ್ಯ ಟಿಕೆಟ್ ಮೌಲ್ಯ 8,598 ಕೋಟಿ ರೂ.ಗಳಾಗಿರುತ್ತದೆ. ಮಹಿಳಾ ಪ್ರಯಾಣಿಕರ ಪ್ರಯಾಣದ ಪ್ರಮಾಣ ಶೇ.58.37ರಷ್ಟು ಆಗಿರುತ್ತದೆ. ಶಕ್ತಿ ಯೋಜನೆ ಜಾರಿಗೆ ಮುನ್ನ ನಾಲ್ಕು ನಿಗಮಗಳ ವಾಹನಗಳಲ್ಲಿ ಸರಾಸರಿ 82.51 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಪ್ರಸ್ತುತ ಈ ಸಂಖ್ಯೆಯು 108.70 ಲಕ್ಷಕ್ಕೆ ಹೆಚ್ಚಳವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಹಿಂದಿನ ಒಂದು ವರ್ಷದ ಅವಧಿಯಲ್ಲಿ ನಾಲ್ಕು ನಿಗಮಗಳಲ್ಲಿ 1,004 ಮೃತ ಸಿಬ್ಬಂದಿಗಳ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಆದೇಶ ನೀಡಲಾಗಿದೆ. ಸಾರಿಗೆ ಸುರಕ್ಷಾ ಅಪಘಾತ ಪರಿಹಾರ ವಿಮಾ ಯೋಜನೆಯಡಿ ಅಪಘಾತದಿಂದ ಮೃತಪಟ್ಟ 22 ಸಿಬ್ಬಂದಿಗಳ ಅವಲಂಭಿತರಿಗೆ ತಲಾ ಒಂದು ಕೋಟಿ ರೂ.ನಂತೆ ಇದುವರೆಗೆ 22 ಕೋಟಿ ರೂ.ಗಳ ಪರಿಹಾರ ನೀಡಲಾಗಿದೆ ಎಂದು ಅವರು ತಿಳಿಸಿದರು.
ನೌಕರರ ಕುಟುಂಬ ಕಲ್ಯಾಣ ಪರಿಹಾರ ಯೋಜನೆಯಡಿ ಹೃದಯಾಘಾತ, ಕ್ಯಾನ್ಸರ್, ಸ್ಟ್ರೋಕ್ ಮತ್ತಿತರ ಕಾರಣಗಳಿಂದ ಮೃತಪಟ್ಟ ನೌಕರರ ಕುಟುಂಬಕ್ಕೆ ತಲಾ 10 ಲಕ್ಷ ರೂ.ಗಳಂತೆ 81 ಸಿಬ್ಬಂದಿಗಳ ಅವಲಂಬಿತರಿಗೆ 8.10 ಕೋಟಿ ರೂ.ಗಳ ಪರಿಹಾರ ವಿತರಿಸಲಾಗಿದೆ. ಸಾರಿಗೆ ವಿದ್ಯಾಚೇತನ ಯೋಜನೆಯಡಿ ನಿಗಮದ ಸಿಬ್ಬಂದಿಗಳ ಮಕ್ಕಳಿಗೆ ಈವರೆಗೂ 3.05 ಕೋಟಿ ರೂ. ಸ್ಕಾಲರ್‌ಶಿಪ್ ನೀಡಲಾಗಿದೆ ಎಂದು ಅವರು ಹೇಳಿದರು.
ನಿಗಮಕ್ಕೆ ಲಭಿಸಿರುವ ಪ್ರಶಸ್ತಿಗಳು: ಹಿಂದಿನ ಒಂದೂವರೆ ವರ್ಷದ ಅವಧಿಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ 112 ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿರುತ್ತದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಇದೇ ವೇಳೆ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್, ಆರ್.ರಾಮಚಂದ್ರನ್, ಡಾ. ನಂದಿನಿದೇವಿ ಕೆ. ಸೇರಿದಂತೆ ಕಾರ್ಮಿಕ ಸಂಘಟನೆಗಳ ಮುಖಂಡರು, ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಅಂಬಾರಿ ಉತ್ಸವ ಸ್ಲೀಪರ್ ಬಸ್‍ಗಳ ವಿಶಿಷ್ಟತೆ: ಅಂಬಾರಿ ಉತ್ಸವ ಸ್ಲೀಪರ್ ಬಸ್ 15 ಮೀಟರ್ ಉದ್ದವಿದ್ದು, 40 ಬರ್ತ್ 2x1 ಸಂರಚನೆಯೊಂದಿಗೆ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ನೀಡುತ್ತದೆ. ಇದು ಶಕ್ತಿಯುತ ಹಾಲೋಜನ್ ಹೆಡ್ ಲೈಟ್ಗಳು ಮತ್ತು ಡೇ ಟೈಮ್ ರನ್ನಿಂಗ್ ಲೈಟ್‍ಗಳನ್ನು ಹೊಂದಿರುತ್ತದೆ.
ಹೊಸ ಪ್ಲಶ್ ಇಂಟೀರಿಯರ್ಸ್ ಮತ್ತು ಸ್ಕ್ಯಾಂಡಿನೇವಿಯನ್ ಶೈಲಿಯ ಎಕ್ಸ್ಟೀರಿಯರ್ಸ್ ಹೊಂದಿದೆ, ಇದು ದೃಶ್ಯಾವಳಿಯಲ್ಲಿ ಆಕರ್ಷಕ ಎಸ್ಥೆಟಿಕ್ಸ್ ನೀಡುತ್ತದೆ. ವಾಯುಗತಿ ಶಾಸ್ತ್ರದ ವಿನ್ಯಾಸವು ಉತ್ತಮ ಇಂಧನ ದಕ್ಷತೆಯನ್ನು ಒದಗಿಸುತ್ತದೆ. ನೂತನ ಆವಿಷ್ಕಾರದ ಎಂಜಿನ್ ತಂತ್ರಜ್ಞಾನವು ಶ್ರೇಷ್ಠ ಕಾರ್ಯಕ್ಷಮತೆಯನ್ನು ಮತ್ತು ಸುಧಾರಿತ ಇಂಧನ ದಕ್ಷತೆಯನ್ನು ಒದಗಿಸುತ್ತದೆ.
ಚಾಲಕರು ಪ್ರಯಾಣಿಕರ ಬಾಗಿಲಿನಿಂದ ಪಾದಚಾರಿಗಳನ್ನು ಸುಲಭವಾಗಿ ನೋಡಬಹುದಾದ ಕಾರಣ, ಪಾದಚಾರಿ ಸುರಕ್ಷತೆಯನ್ನು ಸುಧಾರಿಸಿದೆ.