ಅಧಿವೇಶನ | ದೇವಸ್ಥಾನ ಜಾಗ ಒತ್ತುವರಿ ತೆರವಿಗೆ ಕ್ರಮ : ರಾಮಲಿಂಗಾರೆಡ್ಡಿ
"36 ಸಾವಿರ ಎಕರೆ ಒತ್ತುವರಿ ಪೈಕಿ 15,413 ತೆರವು"

ಬೆಂಗಳೂರು : ಮುಜರಾಯಿ ಇಲಾಖೆ ವ್ಯಾಪ್ತಿಯ 34ಸಾವಿರ ದೇವಸ್ಥಾನಗಳಿಗೆ ಸೇರಿದ ಸುಮಾರು 36ಸಾವಿರ ಎಕರೆ ಒತ್ತುವರಿಯಾಗಿದ್ದು, ಈ ಸಂಬಂಧ 15,413ಎಕರೆ ಸ್ಥಳವನ್ನು ತೆರವುಗೊಳಿಸಲಾಗಿದೆ. ಇನ್ನುಳಿದ ಜಾಗವನ್ನು ಒಂದು ವರ್ಷದಲ್ಲಿ ತೆರವಿಗೆ ಕ್ರಮ ಕೈಗೊಳಲಾಗುವುದು ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬುಧವಾರ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಕೆ.ಅಬ್ದುಲ್ ಜಬ್ಬಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮುಜರಾಯಿ ಇಲಾಖೆ ಸೇರಿದ ಆಸ್ತಿಗಳ ಅನಧಿಕೃತವಾಗಿ ಬೇರೆಯವರ ಹೆಸರಿನಲ್ಲಿ ಆಸ್ತಿ ಒತ್ತುವರಿಯಾಗಿದ್ದು ಈ ಸಂಬಂಧ ಭೂಕಬಳಿಕೆ ನ್ಯಾಯಾಲಯ ಸೇರಿ ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದರು.
ಹಿಂದೂ ಧಾರ್ಮಿಕ ಸಂಸ್ಥೆಗಳ ಜಾಗದ ರಕ್ಷಣೆ ಹಾಗೂ ಒತ್ತುವರಿಯಾಗಿದ್ದ 36 ಸಾವಿರ ಎಕರೆ ಜಾಮೀನಿನ ಪೈಕಿ 2024ರಲ್ಲಿ 15,413 ಎಕರೆ ಜಮೀನು ಇಂಡೀಕರಣ ಮಾಡಲಾಗಿದೆ. ಇನ್ನುಳಿದ ಜಾಗವನ್ನು ಇನ್ನೊಂದು ವರ್ಷದಲ್ಲಿ ಸರ್ವೆಕಾರ್ಯ ಮುಗಿಸಿ ತೆರವುಗೊಳಿಸಲಾಗುವುದು ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಮುಜರಾಯಿ ಇಲಾಖೆಗೆ ಸೇರಿದ ಜಮೀನುಗಳನ್ನು ಸಂರಕ್ಷಿಸಲು ಹಾಗೂ ಸರ್ವೇ ಕಾರ್ಯ ಮುಗಿಸಲು ತಿಂಗಳುವಾರು ಗುರಿ ನಿಗದಿಪಡಿಸಲಾಗಿದೆ. ನ್ಯಾಯಾಲಯದಲ್ಲಿರುವ ವ್ಯಾಜ್ಯಗಳ ನಿರ್ವಹಣೆ ಕುರಿತಂತೆ ಆಯುಕ್ತಾಲಯ ಹಂತದ ಹಿರಿಯ ಅಧಿಕಾರಿಯನ್ನು ಎಸ್ಟೇಟ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಇನ್ನೊಂದು ವರ್ಷದೊಳಗೆ ಒತ್ತುವರಿಯಾಗಿರುವ ಇಲಾಖೆಯ ಎಲ್ಲಾ ಜಾಗವನ್ನು ತೆರವುಗೊಳಿಸಲಾಗುವುದು ಎಂದು ರಾಮಲಿಂಗಾರೆಡ್ಡಿ ಭರವಸೆ ನೀಡಿದರು.