ರಾಮನಗರ: ಚುನಾವಣಾಧಿಕಾರಿಗಳ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ; ಮತದಾನದ ಬ್ಯಾಲೆಟ್ ಪೇಪರ್ ಕಸಿದು ಪರಾರಿ
Screengrab : X
ಬೆಂಗಳೂರು: ಹಾಲು ಉತ್ಪಾದಕರ ಸಂಘದ ಚುನಾವಣೆಗಾಗಿ ತೆರಳುತ್ತಿದ್ದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ, ಮತದಾನದ ಬ್ಯಾಲೆಟ್ ಪೇಪರ್ಗಳನ್ನು ಕಸಿದುಕೊಂಡು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ರಾಮನಗರ ಜಿಲ್ಲೆಯಲ್ಲಿ ವರದಿಯಾಗಿದೆ.
ಜಿಲ್ಲೆಯ ಮಾಗಡಿ ತಾಲ್ಲೂಕಿನ ಹುಲ್ಲೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಂಘಕ್ಕೆ ಸೆ.೨೭ರಂದು ಚುನಾವಣೆ ನಡೆಯಬೇಕಿತ್ತು. ಚುನಾವಣೆ ನಡೆಸಲು ಐವರು ಅಧಿಕಾರಿಗಳು ಬ್ಯಾಲೆಟ್ ಪೇಪರ್ ಮತ್ತು ಚುನಾವಣಾ ಪರಿಕರಗಳನ್ನು ತೆಗೆದುಕೊಂಡು ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ, ಮಾರ್ಗ ಮಧ್ಯದಲ್ಲಿ ಅವರನ್ನು ಅಡ್ಡಗಟ್ಟಿದ ಐವರು ದುಷ್ಕರ್ಮಿಗಳ ಗುಂಪು ಅಧಿಕಾರಗಳ ಮೇಲೆ ಹಲ್ಲೆ ನಡೆಸಿದೆ. ಚುನಾವಣಾ ಪರಿಕರಗಳನ್ನು ಕಿತ್ತುಕೊಂಡು ಪರಾರಿಯಾಗಿದೆ. ಚುನಾವಣೆ ತಡೆಯುವ ಉದ್ದೇಶದಿಂದ ಅಧಿಕಾರಿಗಳ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಚುನಾವಣೆಯಲ್ಲಿ ಸೋಲುವ ಭಯದಿಂದ ಗ್ರಾಮದ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಬಲರಾಮ್ ಹಾಗೂ ಅವರ ಬೆಂಬಲಿಗರ ತಂಡವು ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲಿಸರು ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.