ರಾಮನಗರ ಜಿಲ್ಲೆಯ ಹೆಸರು ಬದಲಾವಣೆಗೆ ಕೇಂದ್ರ ನಕಾರ

ಬೆಂಗಳೂರು : ರಾಮನಗರ ಜಿಲ್ಲೆಗೆ ‘ಬೆಂಗಳೂರು ದಕ್ಷಿಣ ಜಿಲ್ಲೆ’ ಎಂದು ಮರುನಾಮಕರಣ ಮಾಡುವ ಕರ್ನಾಟಕ ರಾಜ್ಯ ಸರಕಾರದ ಪ್ರಸ್ತಾವವನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ. ಹೀಗಾಗಿ ರಾಮನಗರ ಜಿಲ್ಲೆ ಹೆಸರು ಬದಲಾವಣೆ ಮಾಡುವ ಇರಾಧೆಯಲ್ಲಿದ್ದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ರಾಜ್ಯ ಸರಕಾರ ನಿರ್ಧರಿಸಿತ್ತು. ಈ ಸಂಬಂಧ ಕೇಂದ್ರಕ್ಕೆ ಪ್ರಸ್ತಾವವನ್ನೂ ಸಲ್ಲಿಸಿತ್ತು. ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣದ ನಿರ್ಧಾರವನ್ನು ತಿರಸ್ಕರಿಸಿದ್ದರಿಂದ ಡಿ.ಕೆ.ಶಿವಕುಮಾರ್ ಕನಸು ಭಗ್ನವಾದಂತೆ ಆಗಿದೆ.
ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಚನ್ನಪಟ್ಟಣ ಉಪಚುನಾವಣೆ ವೇಳೆ ಡಿ.ಕೆ.ಶಿವಕುಮಾರ ರಾಮನಗರ ಜಿಲ್ಲೆಗೆ ಮರುನಾಮಕರಣ ಮಾಡುವ ಕುರಿತು ಪ್ರಸ್ತಾಪಿಸಿದ್ದರು. ಈ ವಿಚಾರವು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಶೀತಲ ಸಮರಕ್ಕೂ ಕಾರಣವಾಗಿತ್ತು. ಇದೀಗ ಕೇಂದ್ರ ಸರಕಾರ ಪ್ರಸ್ತಾವವನ್ನೇ ತಿರಸ್ಕರಿಸಿರುವುದು ಮತ್ತೊಂದು ಸುತ್ತಿನ ವಾಗ್ವಾದಕ್ಕೆ ಕಾರಣವಾಗಲಿದೆ.