ರಾಮನಗರ | ಆರತಿ ತಟ್ಟೆ ಮುಟ್ಟಿದ್ದಕ್ಕಾಗಿ ದಲಿತ ಶಿಕ್ಷಕನಿಗೆ ಹಲ್ಲೆ ಆರೋಪ: ಮೂವರ ವಿರುದ್ಧ ಪ್ರಕರಣ ದಾಖಲು
ಹಲ್ಲೆಗೊಳಗಾದ ಶಿಕ್ಷಕ
ರಾಮನಗರ: ಗ್ರಾಮದೇವತೆ ಹಬ್ಬದಲ್ಲಿ ದೇವರಿಗಾಗಿ ತರುತ್ತಿದ್ದ ಆರತಿ ತಟ್ಟೆ ಮುಟ್ಟಿದ್ದಕ್ಕಾಗಿ ಪರಿಶಿಷ್ಟ ಸಮುದಾಯದ ಶಿಕ್ಷಕರೊಬ್ಬರಿಗೆ ಮೇಲ್ವರ್ಗಕ್ಕೆ ಸೇರಿದ ಯುವಕರ ಗುಂಪೊಂದು ಥಳಿಸಿ, ಕೊಲೆ ಬೆದರಿಕೆ ಹಾಕಿರುವ ಘಟನೆ ಮಾಗಡಿ ತಾಲೂಕಿನ ಹೇಮಾಪುರದಲ್ಲಿ ವರದಿಯಾಗಿದೆ.
ಜೂನ್ 28ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹೇಮಾಪುರ ನಿವಾಸಿ ಮಂಜುನಾಥ್ ಹಲ್ಲೆಗೊಳಗಾದ ಶಿಕ್ಷಕರಾಗಿದ್ದು, ಈ ಸಂಬಂಧ ಮಂಜುನಾಥ್ ಕುದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಗ್ರಾಮದ ಲೋಕೇಶ್ ಎಚ್.ಆರ್, ದೀಪಕ್ ಎಚ್.ಎಂ., ವೆಂಕಟೇಶ್ ಎಚ್.ಟಿ. ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆ ವಿವರ: ಗ್ರಾಮದೇವತೆ ಹಬ್ಬದ ಅಂಗವಾಗಿ ಜೂನ್ 28ರಂದು ಸಂಜೆ 5.30ಕ್ಕೆ ದೇವಸ್ಥಾನದ ಹತ್ತಿರ ಒಕ್ಕಲಿಗ ಸಮುದಾಯದವರು ಆರತಿ ತರುತ್ತಿದ್ದರು. ಈ ವೇಳೆ ನಾನು ಆಕಸ್ಮಿಕವಾಗಿ ಆರತಿ ತಟ್ಟೆ ಮುಟ್ಟಿದ್ದಕ್ಕೆ ಲೋಕೇಶ್ ಮತ್ತು ಸಹಚರರು ಜಾತಿ ಹೆಸರಿನಲ್ಲಿ ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಅಲ್ಲದೇ, ದೇವಿಗೆ ಬಲಿ ಕೊಡಲು ನಾವು ಕೋಣವನ್ನು ತಂದಿದ್ದೇವೆ. ಈ ವಿಚಾರವಾಗಿ ಯಾರಾದರೂ ಅಡ್ಡ ಬಂದರೆ, ತಲೆಯನ್ನು ಕಡಿಯುತ್ತೇವೆ ಎಂದು ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಮಂಜುನಾಥ್ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.