ರಮೇಶ್ ಜಾರಕಿಹೊಳಿ, ಯತ್ನಾಳ್ ವಿಚಾರವನ್ನು ಹೈಕಮಾಂಡ್ ನೋಡಿಕೊಳ್ಳಲಿದೆ : ಆರ್.ಅಶೋಕ್
ಆರ್.ಅಶೋಕ್
ಬೆಂಗಳೂರು: ‘ಬಿ.ವೈ.ವಿಜಯೇಂದ್ರರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನಾನು ಎಂದಿಗೂ ಒಪ್ಪುವುದಿಲ್ಲ’ ಎಂಬ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಹೇಳಿಕೆಯನ್ನು ನಾನು ಗಮನಿಸಿಲ್ಲ. ನಾನು ಊರಲ್ಲಿ ಇರಲಿಲ್ಲ. ವಿಜಯೇಂದ್ರ ಮತ್ತು ರಮೇಶ್ ಜಾರಕಿಹೊಳಿ ಮಧ್ಯದ ಜಗಳದಲ್ಲಿ ನಮ್ಮ ಪಾತ್ರವೇನು ಇಲ್ಲ’ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಆರೆಸ್ಸೆಸ್ ನಿರ್ದೇಶನವನ್ನೇನು ನೀಡಿಲ್ಲ. ನಾನು ರಾಜಕಾರಣಿ ಆಗುವುದಕ್ಕಿಂತ ಮೊದಲು ಆರೆಸ್ಸೆಸ್ ಸ್ವಯಂ ಸೇವಕ. ಹಿರಿಯರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಕೇಂದ್ರದ ಸಂಪರ್ಕದಲ್ಲಿದ್ದು, ಅವರ ಜೊತೆ ಹೈಕಮಾಂಡ್ ಚರ್ಚೆ ನಡೆಸುತ್ತದೆ" ಎಂದರು.
‘ಹೈಕಮಾಂಡ್ ಹೇಳಿದಂತೆ ನಡೆಯುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಅದು ಅವರಿಬ್ಬರ ನಡುವೆ ಇರುವ ವಿಚಾರ, ನಮ್ಮದೇನೂ ಪಾತ್ರ ಇಲ್ಲ. ಕೇಂದ್ರದ ನಾಯಕರು ಅದರ ಬಗ್ಗೆ ಗಮನ ಹರಿಸುತ್ತಾರೆ. ಕಲಬುರ್ಗಿ ನಗರದಲ್ಲಿ ಸಂಪುಟ ಸಭೆಯಿಂದ ಏನು ಪ್ರಯೋಜನವಿಲ್ಲ. ಅದು ಹೋದ ಸಿದ್ಧ ಬಂದ ಸಿದ್ಧ ಅಷ್ಟೇ ಎಂದು ಲೇವಡಿ ಮಾಡಿದರು.