ರಾಮನಗರ | ಟ್ಯೂಷನ್ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಮಕ್ಕಳಿಗೆ ವಾಹನ ಢಿಕ್ಕಿ ಪ್ರಕರಣ: ಮೃತರ ಸಂಖ್ಯೆ 4ಕ್ಕೆ ಏರಿಕೆ
ಬಾಲಕಿಯ ಮೃತದೇಹವಿಟ್ಟು ಗ್ರಾಮಸ್ಥರಿಂದ ಪ್ರತಿಭಟನೆ
ರಾಮನಗರ: ತಾಲೂಕಿನ ಗೊಲ್ಲರದೊಡ್ಡಿಯಲ್ಲಿ ಮಕ್ಕಳ ಮೇಲೆ ಗೂಡ್ಸ್ ವಾಹನ ಹರಿದು ಸಂಭವಿಸಿದ ಭೀಕರ ಅಪಘಾತ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಬಾಲಕಿ ರವಿವಾರ ರಾತ್ರಿ ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ.
ಮೃತ ಬಾಲಕಿಯನ್ನು ಗ್ರಾಮದ ರಾಜಣ್ಣ ಮತ್ತು ಶಾಂತಮ್ಮ ದಂಪತಿಯ ಎರಡನೇಯ ಪುತ್ರಿ, ಒಂದನೇ ತರಗತಿಯಲ್ಲಿ ಓದುತ್ತಿದ್ದ ಜ್ಞಾನವಿ ಎಂದು ಗುರುತಿಸಲಾಗಿದೆ. ಘಟನೆ ನಡೆದ ದಿನವೇ (ಆ.9) ಅವರ ಮೊದಲ ಪುತ್ರಿ ಶಾಲಿನಿ (9) ಕೊನೆಯುಸಿರೆಳೆದಿದ್ದಳು. ಗೂಡ್ಸ್ ಚಾಲಕನ ನಿರ್ಲಕ್ಷ್ಯದಿಂದಾಗಿ, ಇದೀಗ ದಂಪತಿಯ ಇಬ್ಬರೂ ಪುತ್ರಿಯರು ಮೃತಪಟ್ಟಿದ್ದಾರೆ. ಇದರೊಂದಿಗೆ ಈ ಘಟನೆಯಲ್ಲಿ ಸಾವನ್ನಪ್ಪಿದ ಮಕ್ಕಳ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ಘಟನೆ ವಿವರ:
ಆ. 9ರಂದು ರಾತ್ರಿ ಐವರು ಮಕ್ಕಳು ಟ್ಯೂಷನ್ ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದರು. ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಗೂಡ್ಸ್ ವಾಹನ ಮಕ್ಕಳ ಮೇಲೆ ಹರಿದಿದೆ. ಅಪಘಾತದ ತೀವ್ರತೆಗೆ ಇಬ್ಬರು ಮಕ್ಕಳು (ರೋಹಿನ್ (5) ಮತ್ತು ಶಾಲಿನಿ (8)) ಸ್ಥಳದಲ್ಲೇ ಮೃತಪಟ್ಟಿದ್ದರು .ಗಂಭೀರವಾಗಿ ಗಾಯಗೊಂಡಿದ್ದ ಮೂವರಿಗೆ ರಾಮನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸ್ಥಳಾಂತರಿಸಲಾಗಿತ್ತು. ಆ ಪೈಕಿ, ತಲೆಗೆ ಗಂಭೀರವಾಗಿ ಗಾಯವಾಗಿದ್ದ 5ನೇ ತರಗತಿಯ ಸುಚಿತ್‌ಗೆ ಬಿಜಿಎಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಬಳಿಕ, ಒಂದು ವಾರ ಸಾವು–ಬದುಕಿನೊಂದಿಗೆ ಹೋರಾಡಿದ್ದ ಸುಚಿತ್, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ. ಇದೀಗ ಜ್ಞಾನವಿ ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಗ್ರಾಮಸ್ಥರಿಂದ ಪ್ರತಿಭಟನೆ
ಜ್ಞಾನವಿ ಮೃತಪಟ್ಟಿರುವ ವಿಚಾರ ತಿಳಿದ ಬೆನ್ನಲ್ಲೇ ಇಂದು ಬೆಳಗ್ಗೆ ರಸ್ತೆ ಮಧ್ಯೆ ಬಾಲಕಿಯ ಮೃತದೇಹವಿಟ್ಟು ಜಮಾಯಿಸಿದ ಗ್ರಾಮಸ್ಥರು, ಟೈಯರ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.ʼನಾಲ್ವರು ಮಕ್ಕಳನ್ನು ಬಲಿ ಪಡೆದ ಗೂಡ್ಸ್ ವಾಹನದ ಚಾಲಕನಿಗೆ ಕಠಿಣ ಶಿಕ್ಷೆ ವಿಧಿಸಬೇಕುʼ ಎಂದು ಆಗ್ರಹಿಸಿದರು.
ʼಸ್ಥಳಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಬಂದು ಅಳಲು ಆಲಿಸಬೇಕು. ಮೃತ ಮಕ್ಕಳ ಕುಟುಂಬಕ್ಕೆ ಪರಿಹಾರ ನೀಡಬೇಕುʼ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.