ಮೋದಿ ಸರಕಾರದಿಂದ ಸಿದ್ದರಾಮಯ್ಯ ವಿರುದ್ಧ ರಾಜಕೀಯ ಹಗೆತನ : ಸುರ್ಜೇವಾಲ
ರಣದೀಪ್ ಸಿಂಗ್ ಸುರ್ಜೇವಾಲ| PTI
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರ ಮೂಲಕ ಪ್ರಾಸಿಕ್ಯೂಷನ್ಗೆ ಅನುಮತಿ ಕೊಡಿಸುವ ಮೂಲಕ ನರೇಂದ್ರ ಮೋದಿ ಸರಕಾರವು ರಾಜಕೀಯ ಹಗೆತನ ಹಾಗೂ ವೈಯಕ್ತಿಕ ಸೇಡು ತೀರಿಸಿಕೊಳ್ಳಲು ಮುಂದಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಾಂಗ್ರೆಸ್ನ ಐದು ಗ್ಯಾರಂಟಿಗಳನ್ನು ರದ್ದುಗೊಳಿಸಲು ಬಿಜೆಪಿಯು ರಾಜ್ಯದ ಜನರ ಮೇಲೆ ಈ ದಾಳಿ ನಡೆಸಿದೆ. ಬಡವರು, ಹಿಂದುಳಿದವರು, ಎಸ್ಸಿ/ಎಸ್ಟಿ ಮತ್ತು ಹಿಂದುಳಿದ ವರ್ಗಗಳ ವಿರುದ್ಧ ಬಿಜೆಪಿ ಮತ್ತು ಮೋದಿ ಸರಕಾರದಿಂದ ನಡೆದಿರುವ ಷಡ್ಯಂತ್ರವಿದು ಎಂದು ಹೇಳಿದ್ದಾರೆ.
ರಾಜ್ಯದ ಜನತೆ ಮತ್ತು ಅದರ ಚುನಾಯಿತ ಸರಕಾರದ ವಿರುದ್ಧ ಪ್ರಧಾನಮಂತ್ರಿ ಸಚಿವಾಲಯ ಮತ್ತು ಗೃಹ ಸಚಿವಾಲಯದ ಕಾರಿಡಾರ್ ಗಳಲ್ಲಿ ಹೆಣೆದ ರಾಜಕೀಯ ಷಡ್ಯಂತ್ರದಲ್ಲಿ, ‘ಕರ್ನಾಟಕದ ಕೈಗೊಂಬೆ ರಾಜ್ಯಪಾಲರು' ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಮಂಜೂರು ಮಾಡುವ ಮೂಲಕ ತಮ್ಮ ರಾಜಕೀಯ ಯಜಮಾನರ ತಾಳಕ್ಕೆ ತಕ್ಕಂತೆ ಕುಣಿದಾಡಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಕೋಟ್ಯಂತರ ಕನ್ನಡಿಗರ ಆಶೀರ್ವಾದ ಪಡೆದು 2023ರ ವಿಧಾನಸಭೆ ಚುನಾವಣೆಯಲ್ಲಿ ಜನರ ಸೇವೆಗಾಗಿ ಕಾಂಗ್ರೆಸ್ ನಿರ್ಣಾಯಕ ಜನಾದೇಶವನ್ನು ಪಡೆದುಕೊಂಡಿತು. ಪ್ರಧಾನಿ ಮೋದಿ ಮತ್ತು ಬಿಜೆಪಿಗೆ ರಾಜ್ಯದಲ್ಲಿ ತಮ್ಮ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದುದರಿಂದ, ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸಲು ಎಲ್ಲ ತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೆ ಎಂದು ಸುರ್ಜೇವಾಲ ದೂರಿದ್ದಾರೆ.
ರಾಜ್ಯಪಾಲರ ಕಚೇರಿಯನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷದ ಪರವಾಗಿ ರಾಜ್ಯದ ಜನತೆ ನೀಡಿರುವ ಜನಾದೇಶವನ್ನು ಕಸಿಯಲು ಕೇಂದ್ರ ಸರಕಾರ, ಬಿಜೆಪಿ ಪ್ರಯತ್ನಿಸುತ್ತಿದೆ. ರಾಜ್ಯದ ಐದು ಕೋಟಿ ಕನ್ನಡಿಗರಿಗೆ ಪ್ರಯೋಜನ ಕಲ್ಪಿಸುತ್ತಿರುವ ಗ್ಯಾರಂಟಿಗಳನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಕಟ್ಟುಕಥೆಗಳಿಂದ ದೇಶದ ಅತ್ಯಂತ ಹಿರಿಯ ಹಿಂದುಳಿದ ವರ್ಗದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಷ್ಠೆಕೆ ಕಳಂಕ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇಂತಹ ಕಪೋಲಕಲ್ಪಿತವಾಗಿ ಸಿದ್ಧಗೊಳಿಸಿದ ಪಿತೂರಿಗಳು ಜನತಾ ನ್ಯಾಯಾಲಯದಲ್ಲಿ ತುಂಡು ತುಂಡಾಗುತ್ತವೆ. ಕಾಂಗ್ರೆಸ್ ಗ್ಯಾರಂಟಿಗಳನ್ನು ನಿಲ್ಲಿಸಲು ಬಿಜೆಪಿ ತನ್ನ ದುಷ್ಟ ಉದ್ದೇಶದಲ್ಲಿ ಯಶಸ್ವಿಯಾಗಲು ಕಾಂಗ್ರೆಸ್ ಪಕ್ಷ ಮತ್ತು ಅದರ ಸರಕಾರ ಎಂದಿಗೂ ಅವಕಾಶ ನೀಡುವುದಿಲ್ಲ. ನಾವು ಕರ್ನಾಟಕ ಮತ್ತು ದೇಶದ ಜನರ ನ್ಯಾಯಾಲಯದಲ್ಲಿ ಕಾನೂನಾತ್ಮಕವಾಗಿ ಹೋರಾಡುತ್ತೇವೆ. ಸತ್ಯಕ್ಕೆ ಜಯ ಸಿಗುತ್ತದೆ. ಸತ್ಯಮೇವ ಜಯತೇ ಎಂದು ಸುರ್ಜೇವಾಲ ತಿಳಿಸಿದ್ದಾರೆ.