ರಾಜ್ಯದಲ್ಲಿ ಬಿಜೆಪಿಯ ನೇತೃತ್ವ ಯಾರು ವಹಿಸಿಕೊಂಡಿದ್ದಾರೆಂಬುದೇ ಗೊತ್ತಾಗುತ್ತಿಲ್ಲ: ಸುರ್ಜೇವಾಲ ವ್ಯಂಗ್ಯ
"ಬಿಜೆಪಿ ಪಕ್ಷದಲ್ಲಿ ಆಂತರಿಕ ಯುದ್ಧ ನಡೆಯುತ್ತಿದೆ"
ರಣದೀಪ್ ಸಿಂಗ್ ಸುರ್ಜೇವಾಲ
ಬೆಂಗಳೂರು : ರಾಜ್ಯ ಸರಕಾರದ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿರುವ ಬಿಜೆಪಿಯಲ್ಲಿ ತಮ್ಮ ನಾಯಕ ಯಾರು ಎಂಬುದೇ ಗೊತ್ತಾಗುತ್ತಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ವ್ಯಂಗ್ಯವಾಡಿದ್ದಾರೆ.
ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಅಸ್ಥವ್ಯಸ್ತವಾಗಿದೆ. ಯತ್ನಾಳ್, ರಮೇಶ್ ಜಾರಕಿಹೊಳಿ, ಆರ್.ಅಶೋಕ್, ವಿಜಯೇಂದ್ರ, ಸಂತೋಷ್, ಬೊಮ್ಮಾಯಿ ಇವರಲ್ಲಿ ಪಕ್ಷದ ನೇತೃತ್ವ ಯಾರು ವಹಿಸಿಕೊಂಡಿದ್ದಾರೆ? ಎಂಬುದೇ ಗೊತ್ತಿಲ್ಲ ಎಂದು ಹೇಳಿದರು.
ಪಕ್ಷದಲ್ಲಿ ಆಂತರಿಕ ಯುದ್ಧ ನಡೆಯುತ್ತಿದ್ದರೆ ಅದು ಬಿಜೆಪಿಯಲ್ಲಿ ನಡೆಯುತ್ತಿದೆ. ಅವರು ಗಾಜಿನ ಮನೆಯಲ್ಲಿ ನಿಂತು ಬೇರೆಯವರ ಮನೆ ಮೇಲೆ ಕಲ್ಲು ಹೊಡೆಯಬಾರದು. ಬಿಜೆಪಿಯ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಅನಗತ್ಯವಾಗಿ ಗದ್ದಲ ಸೃಷ್ಟಿಸುತ್ತಿದ್ದಾರೆ ಎಂದು ಸುರ್ಜೇವಾಲ ಟೀಕಿಸಿದರು.
ನಮ್ಮ ಪಕ್ಷ, ಸಿದ್ದರಾಮಯ್ಯ, ಶಿವಕುಮಾರ್, ಅರ್ಜುನನಂತೆ ತಮ್ಮ ಗುರಿಯತ್ತ ದೃಷ್ಟಿ ನೆಟ್ಟಿದ್ದಾರೆ. ಇವರ ಗುರಿ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವುದು ಹಾಗೂ ಸಮರ್ಥವಾಗಿ ಸರಕಾರವನ್ನು ನಡೆಸುವುದು. ಬಿಜೆಪಿಯವರು ಅನಗತ್ಯವಾಗಿ ಗ್ಯಾರಂಟಿ ವಿರುದ್ಧ ಟೀಕೆ ಮಾಡಿ ಗೊಂದಲ ಮೂಡಿಸಲು ಮುಂದಾಗಿದ್ದಾರೆ ಎಂದು ಅವರು ಹೇಳಿದರು.
100 ಗಾಂಧಿ ಭಾರತ ಕಚೇರಿ ನಿರ್ಮಾಣ: ಜ.21ರಂದು ಬೆಳಗಾವಿಯಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ. ಈ ಸಮಾವೇಶದ ಉದ್ದೇಶವನ್ನು ಈಗಾಗಲೇ ನಾವು ವಿವರಿಸಿದ್ದೇವೆ. ಇದರ ಜತೆಗೆ ಕೆಪಿಸಿಸಿ ಅಧ್ಯಕ್ಷರು, ಸಿಎಂ ಸೇರಿ ಚರ್ಚೆ ಮಾಡಿ ರಾಜ್ಯದಲ್ಲಿ 100 ಗಾಂಧಿ ಭಾರತ ಕಚೇರಿಗಳನ್ನು ನಿರ್ಮಿಸಲು ತೀರ್ಮಾನಿಸಿದ್ದಾರೆ ಎಂದು ಸುರ್ಜೇವಾಲ ಮಾಹಿತಿ ನೀಡಿದರು.
ಫೆಬ್ರವರಿ ತಿಂಗಳಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿನಲ್ಲಿ ಒಟ್ಟಿಗೆ ಈ ಎಲ್ಲ ಕಚೇರಿಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈಗಾಗಲೇ 74 ಕಚೇರಿಗಳ ನಿರ್ಮಾಣದ ಜಾಗ ಗುರುತಿಸಲಾಗಿದ್ದು, ಉಳಿದ ಕಚೇರಿಗಳ ನಿರ್ಮಾಣದ ಬಗ್ಗೆ ಪಕ್ಷ ಶೀಘ್ರ ತೀರ್ಮಾನ ಮಾಡಲಿದೆ ಎಂದು ಅವರು ತಿಳಿಸಿದರು.
ಈ ವರ್ಷ ಪಕ್ಷದ ಸಂಘಟನೆಗೆ ಆದ್ಯತೆ ನೀಡಲಾಗಿದ್ದು, ಪಂಚಾಯ್ತಿ ಹಾಗೂ ವಾರ್ಡ್ ಮಟ್ಟದ ಸಮಿತಿಗಳನ್ನು ರಚಿಸಲು ಗಮನಹರಿಸಲಾಗುವುದು. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ತಳಮಟ್ಟದಲ್ಲಿ ಸಾಧ್ಯವಾದಷ್ಟು ಹೆಚ್ಚು ಪದಾಧಿಕಾರಿಗಳನ್ನು ನೇಮಿಸಲು ನಿರ್ಧರಿಸಲಾಗಿದೆ ಎಂದು ಸುರ್ಜೇವಾಲ ತಿಳಿಸಿದರು.
ಉದಯಪುರ ನಿರ್ಣಯದ ಪ್ರಕಾರ ಒಬ್ಬ ವ್ಯಕ್ತಿಗೆ ಒಂದು ಹುದ್ದೆ ಮಾತ್ರ ಸಿಗಬೇಕು ಎಂದು ತೀರ್ಮಾನಿಸಲಾಗಿತ್ತು ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿಜ, ಈ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಆದರೆ ವಿಶೇಷ ಸಂದರ್ಭದಲ್ಲಿ ಈ ನಿಯಮವನ್ನು ಸಡಿಲ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ ಶಾಸಕರು, ಸಚಿವರು ಹಾಗೂ ಪದಾಧಿಕಾರಿಗಳ ಸಭೆಗೆ ಸಚಿರಾದ ಕೆ.ಎನ್.ರಾಜಣ್ಣ ಹಾಗೂ ಡಾ.ಜಿ.ಪರಮೇಶ್ವರ್ ಗೈರಾಗಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುರ್ಜೇವಾಲ, ‘ಡಾ.ಪರಮೇಶ್ವರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದವರು. ಪಕ್ಷವನ್ನು ಅವರು ಮುನ್ನಡೆಸಿದ್ದು ಅವರಿಗೆ ಪಕ್ಷದ ಶಿಸ್ತಿನ ಬಗ್ಗೆ ಅರಿವಿದೆ. ನಾನು ಪಕ್ಷದ ಒಳಗೆ ನಮ್ಮ ನಾಯಕರಿಗೆ ನನ್ನ ಸಂದೇಶ ತಲುಪಿಸಿದ್ದೇನೆ’ ಎಂದರು.