ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಇಲ್ಲ: ರಣದೀಪ್ ಸಿಂಗ್ ಸುರ್ಜೇವಾಲ
"ಯಾವ ಸಚಿವರಿಗೂ ನೋಟಿಸ್ ನೀಡಲು ಕಾರಣವಿಲ್ಲ"

ರಣದೀಪ್ ಸಿಂಗ್ ಸುರ್ಜೇವಾಲ (PTI)
ಬೆಳಗಾವಿ: ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಇನ್ನಿತರರಿಗೆ ಕಾಂಗ್ರೆಸ್ ಪಕ್ಷದಿಂದ ನೋಟಿಸ್ ನೀಡಲಾಗಿದೆ ಎಂದು ವದಂತಿಗಳನ್ನು ಯಾರು ಹಬ್ಬಿಸುತ್ತಿದ್ದಾರೋ ನನಗೆ ಗೊತ್ತಿಲ್ಲ. ಯಾವ ಸಚಿವರಿಗೂ, ಯಾವ ವ್ಯಕ್ತಿಗೂ ನೋಟಿಸ್ ನೀಡಲು ನಮ್ಮ ಬಳಿ ಯಾವುದೇ ಕಾರಣವಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸ್ಪಷ್ಟಪಡಿಸಿದರು.
ಶುಕ್ರವಾರ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪ್ರಾಯೋಜಿತ ಆಧಾರ ರಹಿತ ಮಾತುಗಳ ಮೇಲೆ ವಿಶ್ವಾಸ ಇಡಬೇಡಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿದರು.
ಕೆಪಿಸಿಸಿ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗುತ್ತಿದೆಯೇ? ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗುವುದಾಗಿದ್ದರೇ, ಅವರು(ಡಿ.ಕೆ.ಶಿವಕುಮಾರ್) ಇಲ್ಲಿ ಯಾಕೆ ಬರುತ್ತಿದ್ದರು? ಎಂದು ಮರು ಪ್ರಶ್ನಿಸಿದರು.
100 ವರ್ಷಗಳ ಹಿಂದೆ ಮಹಾತ್ಮ ಗಾಂಧಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಹೋರಾಟಕ್ಕೆ ಇಳಿದ ಬಳಿಕ ಬ್ರಿಟಿಷರ ವಿರುದ್ಧ ನಮಗೆ ಸ್ವಾತಂತ್ರ್ಯ ಲಭಿಸಿತು. ಈಗ 100 ವರ್ಷಗಳ ನಂತರ ಸಾಮಾಜಿಕ ಅಸಮಾನತೆ, ಸಂವಿಧಾನ ಮೇಲಿನ ದಾಳಿಯ ವಿರುದ್ಧ ಹೊಸ ಕ್ರಾಂತಿಗೆ ಸೂತ್ರವಾಗಲಿರುವ ಬೆಳಗಾವಿಯ ಸಮಾವೇಶ ಐತಿಹಾಸಿಕವಾಗಿರಲಿದೆ ಎಂದು ಸುರ್ಜೇವಾಲ ಅಭಿಪ್ರಾಯಪಟ್ಟರು.
ಜ.21ರಂದು ಬೆಳಗಾವಿಯಲ್ಲಿ ಆಯೋಜಿಸಿರುವ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸೇರಿದಂತೆ ದೇಶದ ಎಲ್ಲ ಪ್ರಮುಖ ಕಾಂಗ್ರೆಸ್ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಅಂಬೇಡ್ಕರ್ ಅವರಿಗೆ ಮಾತ್ರ ಅಪಮಾನ ಮಾಡಿಲ್ಲ. ಅಂಬೇಡ್ಕರ್ ಅವರ ತತ್ವ, ವಿಚಾರಗಳ ಮೇಲೆ ನಂಬಿಕೆ ಇರಿಸಿರುವವರನ್ನು ಅಪಹಾಸ್ಯ ಮಾಡಿದ್ದಾರೆ. ಜ.27ರಂದು ಅಂಬೇಡ್ಕರ್ ಅವರ ಜನ್ಮಸ್ಥಳ ಮಧ್ಯಪ್ರದೇಶದ ಇಂಧೋರ್ನಲ್ಲಿರುವ ಮಾಹು ಗ್ರಾಮದಲ್ಲಿ ಸಮಾವೇಶ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಬೆಳಗಾವಿಯಲ್ಲಿ ಹಮ್ಮಿಕೊಂಡಿರುವ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶವು ದೇಶದ ಭವಿಷ್ಯದ ರಾಜಕಾರಣಕ್ಕೆ ಹೊಸ ದಿಕ್ಕು ನೀಡಲಿದೆ ಎಂದು ಹೇಳಿದ ಸುರ್ಜೇವಾಲ, ಈ ಐತಿಹಾಸಿಕ ಸಮಾವೇಶವು ದೇಶದಾದ್ಯಂತ ಹೊಸ ಕ್ರಾಂತಿ ಮಾಡಲಿದೆ ಎಂದು ತಿಳಿಸಿದರು.