ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣ ಸೂಕ್ತ ತನಿಖೆಯಾಗಲಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು : ಚಿತ್ರನಟಿ ರನ್ಯಾರಾವ್ ಚಿನ್ನ ಕಳ್ಳಸಾಗಣೆ ಪ್ರಕರಣ ಸೂಕ್ತ ತನಿಖೆಯಾಗಲಿ. ಆ ಬಳಿಕವಷ್ಟೇ ಪ್ರಕರಣದ ಸತ್ಯಾಸತ್ಯತೆ ತಿಳಿಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ರನ್ಯಾರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಪ್ರಭಾವಿ ಸಚಿವರೊಬ್ಬರ ಕೈವಾಡವಿದೆ ಎಂಬ ಆರೋಪದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಪ್ರಕರಣ ಸೂಕ್ತ ತನಿಖೆಯಾಗಲಿ, ಆಗ ಗೊತ್ತಾಗಲಿದೆ ಎಂದರು.
ಗ್ಯಾರಂಟಿ ಸಮಿತಿಗಳ ವಿರುದ್ಧದ ಬಿಜೆಪಿ ಪ್ರತಿಭಟನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, 2023ರಲ್ಲಿ ಸರ್ಕಾರ ರಚನೆಯಾದ ಬಳಿಕ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಬಳಿಕ ಸೂಕ್ತ ರೀತಿಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ದೃಷ್ಟಿಯಿಂದ ಗ್ಯಾರಂಟಿ ಸಮಿತಿಗಳನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ರಚಿಸಲಾಯಿತು. ಈಗ ಸಮಿತಿಗಳನ್ನು ರದ್ದುಗೊಳಿಸುವಂತೆ ಪ್ರತಿಪಕ್ಷಗಳು ನಡೆಸುತ್ತಿರುವ ಹೋರಾಟಕ್ಕೆ ಅರ್ಥವಿಲ್ಲ ಎಂದು ಹೇಳಿದರು.
ನಮ್ಮ ಯೋಜನೆಗಳನ್ನೇ ಬಿಜೆಪಿ ಇತರ ರಾಜ್ಯಗಳಲ್ಲಿ ಜಾರಿಗೆ ತಂದಿದೆ. ಮಹಾರಾಷ್ಟ್ರ ಸರ್ಕಾರ ನಮ್ಮದೇ ಗೃಹಲಕ್ಷ್ಮೀ ಯೋಜನೆಯನ್ನು ಲಾಡ್ಲಿ ಬೆಹೆನಾ ಹೆಸರಿನಲ್ಲಿ ಚುನಾವಣೆಗೂ ಮುನ್ನ ಎರಡು ತಿಂಗಳು ಹಣ ನೀಡಿತ್ತು. ಆದರೆ, ಚುನಾವಣೆಯಲ್ಲಿ ಗೆದ್ದ ಬಳಿಕ ಈ ಯೋಜನೆಯನ್ನೇ ಬಂದ್ ಮಾಡಲಾಗಿದೆ. ಇದು ಬಿಜೆಪಿ ಸರ್ಕಾರಗಳ ಸ್ಥಿತಿ ಎಂದು ವ್ಯಂಗ್ಯವಾಡಿದರು.
ಮಹಾರಾಷ್ಟ್ರ ಸರ್ಕಾರದ ಸಚಿವರಿಗೆ ಆರೆಸ್ಸೆಸ್ ಕಾರ್ಯಕರ್ತರು ಸಹಾಯಕರಾಗಿದ್ದಾರೆ. ಅವರಿಗೆ ಅಲ್ಲಿನ ಸರ್ಕಾರ ಸಂಬಳ ನೀಡುತ್ತಿದೆ. ಅವರಲ್ಲೇ ತಪ್ಪು ಇಟ್ಟುಕೊಂಡು ನಮ್ಮ ಕಡೆ ಬೆಟ್ಟು ಮಾಡಿ ತೋರಿಸುತ್ತಿದ್ದಾರೆ ಎಂದು ದೂರಿದರು.