ಬಿಜೆಪಿ ಅವಧಿಯಲ್ಲಿಯೇ ಅತ್ಯಾಚಾರ, ಕೊಲೆ ಪ್ರಕರಣಗಳು ಅಧಿಕ: ಗೃಹ ಸಚಿವ ಜಿ.ಪರಮೇಶ್ವರ್
ಬೆಳಗಾವಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಬಿಜೆಪಿ ಆಡಳಿತ ನಡೆಸಿದ ಸಂದರ್ಭದಲ್ಲಿಯೇ ಹೆಚ್ಚಿನ ಕೊಲೆ, ಅತ್ಯಾಚಾರ ಹಾಗೂ ಇನ್ನಿತರೆ ಅಪರಾಧ ಚಟುವಟಿಕೆಗಳು ನಡೆದಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಂಕಿ-ಅಂಶಗಳ ಸಹಿತ ವಿವರಿಸಿದರು.
ಗುರುವಾರ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಮುನಿರಾಜುಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರು ಸೇರಿ ರಾಜ್ಯ ವ್ಯಾಪಿ ಎಲ್ಲಿಯೂ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಇತ್ತೀಚಿಗೆ ನಡೆದ 57 ಕೊಲೆ ಪ್ರಕರಣಗಳ ಪೈಕಿ 56 ಪ್ರಕರಣಗಳಲ್ಲಿ ಪ್ರಮುಖ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ ಎಂದು ಹೇಳಿದರು.
ಈ ಹಿಂದೆ 2011ರಿಂದ 2013ರ ವರೆಗೆ ಎರಡು ವರ್ಷ ನಾಲ್ಕು ತಿಂಗಳು ಅವಧಿಗೆ ಬಿಜೆಪಿಯ ಆರ್. ಅಶೋಕ್ ಗೃಹ ಸಚಿವ ಆಗಿದ್ದ ಸಂದರ್ಭದಲ್ಲಿ ಬರೋಬ್ಬರಿ 4121 ಕೊಲೆ ಪ್ರರಕಣಗಳು ನಡೆದಿವೆ. ಅದರಲ್ಲೂ ಅತ್ಯಾಚಾರ ಪ್ರರಕಣಗಳು 1639 ರಷ್ಟು, ಜತೆಗೆ, 234 ಪೋಕ್ಸೋ ಕಾಯ್ದೆ ಅಡಿಯೂ ಮೊಕದ್ದಮೆ ದಾಖಲಾಗಿವೆ. ಬಸವರಾಜ ಬೊಮ್ಮಾಯಿ ಗೃಹ ಸಚಿವ ಆಗಿದ್ದ ಸಂದರ್ಭದಲ್ಲಿಯೂ 2254 ಕೊಲೆಗಳು, 915ರಷ್ಟು ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಿವೆ.
ಅದೇ ರೀತಿ, ಕಳೆದ ಅವಧಿಗೆ ಗೃಹ ಸಚಿವರಾಗಿದ್ದ ಆರಗ ಜ್ಞಾನೇಂದ್ರ ಆಡಳಿತ ವೇಳೆಯೂ 2417 ಕೊಲೆಗಳು, 949 ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಿವೆ. ಇನ್ನೂ, ಕಾಂಗ್ರೆಸ್ ಸರಕಾರ ಆಡಳಿತ ಆರಂಭ ದಿನದಿಂದ ಇದುವರೆಗೂ 616 ಕೊಲೆಗಳು, 310 ಅತ್ಯಾಚಾರ ಪ್ರಕರಣಗಳು ಮಾತ್ರ ವರದಿಯಾಗಿದೆ ಎಂದು ಅವರು ಉಲ್ಲೇಖಿಸಿದರು.
ಯಾವುದೇ ಅಂಕಿಅಂಶಗಳು ಇಲ್ಲದೆ ನಮ್ಮ ಸರಕಾರದ ವಿರುದ್ಧ ಬಿಜೆಪಿ ಕಾನೂನು ಸುವ್ಯವಸ್ಥೆ ಕೆಟ್ಟಿದೆ ಎಂದು ಸುಳ್ಳು ಆರೋಪ ಮಾಡುವುದು ಸರಿಯಲ್ಲ. ಅಲ್ಲದೆ, ಕೋಮು ಗಲಾಟೆಗಳು ನಿಯಂತ್ರಣದಲ್ಲಿವೆ ಎಂದ ಅವರು, ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಹಿಜಾಬ್ ವಿಚಾರದಲ್ಲಿ ಗಲಾಟೆ, ಶಿವಮೊಗ್ಗದಲ್ಲಿ ಸಾರ್ವಕರ್ ಪೋಟೋ ವಿಚಾರ ಹೀಗೆ ಸಣ್ಣ ಸಣ್ಣ ವಿಚಾರಗಳಿಗೂ ಗಲಭೆ ನಡೆಸಲಾಗಿದೆ ಎಂದು ಪರಮೇಶ್ವರ್ ಹೇಳಿದರು.