ಅತ್ಯಾಚಾರ ಪ್ರಕರಣ | ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ : ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಬೆಂಗಳೂರು : ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು, ನಿರೀಕ್ಷಣಾ ಜಾಮೀನು ಕೋರಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.
ಪ್ರಜ್ವಲ್ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ವಾದ ಮಂಡಿಸಿ, ಆರೋಪಿತ ದೃಶ್ಯಗಳಲ್ಲಿ ಪ್ರಜ್ವಲ್ ರೇವಣ್ಣ ಮುಖವಿಲ್ಲ. ಎಫ್ಎಸ್ಎಲ್ ವರದಿಯಲ್ಲೂ ಈ ಬಗ್ಗೆ ನೆಗೆಟಿವ್ ವರದಿಯಿದೆ. ಪ್ರಜ್ವಲ್ ಅವರ ಕಾರು ಚಾಲಕ ಕಾರ್ತಿಕ್ ದುರುದ್ದೇಶದಿಂದ ವಿಡಿಯೋ ಹಂಚಿದ್ದಾನೆ. ಯಾವುದೇ ಷರತ್ತು ವಿಧಿಸಿ ಜಾಮೀನು ನೀಡುವಂತೆ ಮನವಿ ಮಾಡಿದರು.
ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಸರಕಾರಿ ವಕೀಲರಾದ ಪ್ರೊ.ರವಿವರ್ಮ ಕುಮಾರ್, ಪ್ರಜ್ವಲ್ ರೇವಣ್ಣ ಈವರೆಗೂ ತಮ್ಮ ಫೋನ್ ಪೊಲೀಸರ ವಶಕ್ಕೆ ನೀಡಿಲ್ಲ. ಅವರ ಮನೆಯಲ್ಲಿ ಅವರ ಬಾತ್ ರೂಮಿನಲ್ಲೇ ಘಟನೆ ನಡೆದಿವೆ. ಎಫ್ಎಸ್ಎಲ್ ವರದಿಯಲ್ಲಿ ಫೋಟೋಗಳು ರುಜುವಾತಾಗಿವೆ. ಜೀವ ಬೆದರಿಕೆ ಹಾಕಿದ್ದರಿಂದ ದೂರು ನೀಡಲು ವಿಳಂಬವಾಗಿದೆ. ಒಂದು ವಿಡಿಯೋದಲ್ಲಿನ ಮಹಿಳೆಯ ದೃಶ್ಯ ಮಾತ್ರ ಸ್ಪಷ್ಟವಾಗಿಲ್ಲ. ಈ ಹಿಂದೆಯೂ ದೇಶ ತೊರೆದಿದ್ದರಿಂದ ಪ್ರಜ್ವಲ್ ಗೆ ಜಾಮೀನು ನೀಡಬಾರದು ಎಂದು ಪ್ರತಿವಾದ ಮಂಡಿಸಿದರು.
ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಕಾಯ್ದಿರಿಸಿದೆ.