ಅತ್ಯಾಚಾರ ಆರೋಪ ಪ್ರಕರಣ ರದ್ದು: ಸಂತ್ರಸ್ತೆಗೆ ಜೀವನಾಂಶ ನೀಡುವಂತೆ ವ್ಯಕ್ತಿಗೆ ಹೈಕೋರ್ಟ್ ಆದೇಶ
ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ನಂತರ ನಿರಾಕರಿಸಿದ್ದ ವ್ಯಕ್ತಿಯ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. ಅಲ್ಲದೆ, ದೂರುದಾರೆ ಸಂತ್ರಸ್ತ ಮಹಿಳೆಗೆ ಜೀವನಾಂಶ ನೀಡಲು ಸೂಚನೆ ನೀಡಿದೆ.
ಸಂತ್ರಸ್ತ ಮಹಿಳೆ ಸಲ್ಲಿಸಿದ್ದ ದೂರು ಪ್ರಶ್ನಿಸಿ ಗದಗದ ಹರೀಶ್(ಹೆಸರು ಬದಲಿಸಲಾಗಿದೆ) ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ.
ಅಲ್ಲದೆ, ಪ್ರಕರಣ ಸಂಬಂಧ ದೂರುದಾರರು ಹಾಗೂ ಅರ್ಜಿದಾರರಿಗೆ ಜನಿಸಿದ್ದ ಮಗುವಿನ ಡಿಎನ್‍ಎ ಒಂದೇ ಆಗಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಆ ಮಹಿಳೆಯ ಮಗುವಿನ ನಿರ್ವಹಣೆಗೆ ಪ್ರತಿ ತಿಂಗಳು 10 ಸಾವಿರ ರೂ. ಜೀವನಾಂಶ ಪಾವತಿಸಲು ಸೂಚನೆ ನೀಡಿದೆ.
ಜತೆಗೆ, ಅರ್ಜಿದಾರರ ವಿರುದ್ಧ ಮಹಿಳೆ ಹೂಡಿದ್ದ ಅತ್ಯಾಚಾರ ಆರೋಪ ಪ್ರಕರಣ ರದ್ದುಗೊಳಿಸಿ, ಇದು ಒಪ್ಪಿತ ಲೈಂಗಿಕ ಸಂಬಂಧವಾಗಿದೆ ಮತ್ತು ಮದುವೆಯಾಗುವುದಾಗಿ ನಂಬಿಸಿ ಅದರ ಮೇಲೆ ಪರಸ್ಪರ ಲೈಂಗಿಕ ಸಂಬಂಧ ಬೆಳೆಸಿರುವುದರಿಂದ ಅದು ಅತ್ಯಾಚಾರವಾಗುವುದಿಲ್ಲ ಎಂದು ಹೇಳಿದೆ.
ಸಂತ್ರಸ್ತೆಯನ್ನು ಆಕೆಯ ಪತಿ ಕೂಡ ಕೈಬಿಟ್ಟಿರುವುದರಿಂದ ಆಕೆ ನಿಜಕ್ಕೂ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆರೋಪಿ ಮತ್ತು ಸಂತ್ರಸ್ತೆಯ ಜಗಳದಲ್ಲಿ ಅಮಾಯಕ ಮಗು ತೊಂದರೆಗೆ ಸಿಲುಕಿದಂತಾಗಿದೆ. ಹೀಗಾಗಿ, ವಂಶಿಯ ತಂದೆಯಾಗಿರುವ ಆರೋಪಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗದು. ಅವರು ಅಧೀನ ನ್ಯಾಯಾಲಯದಲ್ಲಿನ ವಿಚಾರಣೆ ಪೂರ್ಣಗೊಳ್ಳುವವರೆಗೆ ಮಗುವಿನ ನಿರ್ವಹಣೆಗೆ ಪ್ರತಿ ತಿಂಗಳು 10 ಸಾವಿರ ರೂ. ಜೀವನಾಂಶ ಪಾವತಿಸಬೇಕು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣವೇನು?: ಅರ್ಜಿದಾರರು ಮತ್ತು ಸಂತ್ರಸ್ತೆ 2018ರಿಂದ ಪರಸ್ಪರ ಪ್ರೀತಿಸುತ್ತಿದ್ದರು ಮತ್ತು ಅವರ ನಡುವೆ ದೈಹಿಕ ಸಂಬಂಧ ಬೆಳೆದಿತ್ತು. ಆದರೆ, ಆಕೆಯನ್ನು ಮನೆಯವರು ಬೇರೊಬ್ಬ ವ್ಯಕ್ತಿಯೊಂದಿಗೆ 2021ರಲ್ಲಿ ಬಲವಂತವಾಗಿ ಮದುವೆ ಮಾಡಿಸಿದ್ದರು. ಆದರೆ ಆಕೆಯ ಮತ್ತು ಪತಿಯ ನಡುವಿನ ಸಂಬಂಧ ಮುರಿದಿದ್ದರಿಂದ ಆಕೆ ತವರು ಮನೆಗೆ ಹಿಂತಿರುಗಿದ್ದಳು.
ಬಳಿಕ ಮತ್ತೆ ಆರೋಪಿಯೊಂದಿಗೆ ಸ್ನೇಹ ಬೆಳೆಸಿದ್ದರು. ಆರೋಪಿ ಮದುವೆಯಾಗುವುದಾಗಿ ಹೇಳಿ ಆಕೆಯನ್ನು ವಂಚಿಸಿ, ಮತ್ತೋರ್ವ ಯುವತಿಯನ್ನು ವರಿಸಲು ಮುಂದಾಗಿದ್ದ. ಹೀಗಾಗಿ, ಆ ಮಹಿಳೆಯು ವ್ಯಕ್ತಿಯ ವಿರುದ್ಧ ವಂಚನೆ ಹಾಗೂ ಅತ್ಯಾಚಾರ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದರು.