ಶಾಸಕ ಮುನಿರತ್ನ ಸೇರಿ 7 ಮಂದಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು
ಮುನಿರತ್ನ
ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.
ಸೆ.18ರಂದು ಸಂತ್ರಸ್ತೆ ನೀಡಿದ ದೂರಿನನ್ವಯ ಶಾಸಕ ಮುನಿರತ್ನ, ವಿಜಯ್ ಕುಮಾರ್, ಕಿರಣ್ ಕುಮಾರ್, ಸುಧಾಕರ್, ಲೋಹಿತ್ ಗೌಡ, ಮಂಜುನಾಥ, ಲೋಕಿ ಎಂಬುವರ ವಿರುದ್ಧ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ 1860, 354ಸಿ ಸೇರಿದಂತೆ ವಿವಿಧ ಕಲಂಗಳ ಅಡಿ ಪ್ರಕರಣ ದಾಖಸಲಾಗಿದೆ ಎಂದು ಎಸ್ಪಿ ಕಾರ್ತಿಕ್ ರೆಡ್ಡಿ ಹೇಳಿದ್ದಾರೆ.
ತನ್ನನ್ನು ಗೋಡೌನ್ಗೆ ಕರೆಯಿಸಿಕೊಂಡು ಮುನಿರತ್ನ ಅತ್ಯಾಚಾರ ಎಸಗಿದ್ದಾರೆ. ಅಲ್ಲದೆ, ವಿಡಿಯೋ ಸೆರೆಹಿಡಿದುಕೊಂಡು, ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಸಂತ್ರಸ್ತ ಮಹಿಳೆಯನ್ನು ಸ್ಥಳ ಮಹಜರು ನಡೆಸಿ, ತನಿಖೆ ಮಾಡಲಾಗಿದೆ. ಇದೊಂದು ಗಂಭೀರ ಸ್ವರೂಪದ ಪ್ರಕರಣ ಆಗಿರುವುದರಿಂದ ರಾಮನಗರ ಡಿವೈಎಸ್ಪಿಗೆ ತನಿಖೆ ನಡೆಸುವಂತೆ ಆದೇಶಿಸಲಾಗಿದ್ದು, ಅವರು ತನಿಖೆ ಮುಂದುವರೆಸಿದ್ದಾರೆ. ನ್ಯಾಯಾಲಯದ ನಿರ್ದೇಶನದ ಮೇರೆಗೆ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಈಗಲೇ ಹೇಳಲು ಆಗುವುದಿಲ್ಲ ಎಂದು ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ಮಾಹಿತಿ ನೀಡಿದ್ದಾರೆ.