ಮುಡಾ ತೀರ್ಪು | ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ : ಆರ್.ಅಶೋಕ್ ಆಗ್ರಹ
ಆರ್.ಅಶೋಕ್/ಸಿದ್ದರಾಮಯ್ಯ(PTI)
ಬೆಂಗಳೂರು : ರಾಜ್ಯಪಾಲರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್ಗೆ ನೀಡಿದ್ದ ಅನುಮತಿ ಕಾನೂನುಬದ್ಧವಾಗಿದೆ ಎಂದು ಹೈಕೋರ್ಟ್ ರಾಜ್ಯಪಾಲರ ನಿರ್ಧಾರವನ್ನು ಎತ್ತಿಹಿಡಿದಿದ್ದು, ಇದು ಸತ್ಯಕ್ಕೆ ಸಂದ ಜಯವಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಜಾಗೊಂಡ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಅವರು, "ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದಾಗಿನಿಂದ ಮುಖ್ಯಮಂತ್ರಿ ಆದಿಯಾಗಿ, ಸಚಿವರು, ಶಾಸಕರು ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಕಳೆದ ಅನೇಕ ದಿನಗಳಿಂದ ರಾಜ್ಯಪಾಲರನ್ನು, ರಾಜಭವನವನ್ನು ನಿಂದಿಸುತ್ತಾ ಬಂದಿದ್ದು, ಹೈಕೋರ್ಟ್ನ ತೀರ್ಪು ಇಡೀ ಕಾಂಗ್ರೆಸ್ ಪಕ್ಷಕ್ಕೆ ಛಡಿ ಏಟು ಕೊಟ್ಟಿದೆ" ಎಂದು ಅಶೋಕ್ ಟೀಕಿಸಿದ್ದಾರೆ.
"ಇನ್ನಾದರೂ ಅನಗತ್ಯವಾಗಿ ರಾಜ್ಯಪಾಲರನ್ನು ನಿಂದಿಸುವುದು ಬಿಟ್ಟು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಎಂದು ಆರ್.ಅಶೋಕ್ ಆಗ್ರಹಿಸಿದ್ದಾರೆ.