ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ನಿಂದ ದ್ವೇಷದ ರಾಜಕಾರಣ : ಆರ್.ಅಶೋಕ್
ಆರ್.ಅಶೋಕ್
ಬೆಂಗಳೂರು: ‘ಮುಡಾ ನಿವೇಶನ ಹಗರಣ ಬೆಳಕಿಗೆ ಬಂದ ಬಳಿಕ ಕಾಂಗ್ರೆಸ್ ಸರಕಾರ ಬಿಜೆಪಿ ನಾಯಕರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದೆ. ಆದರೆ, ಬಿಜೆಪಿ ಇದಕ್ಕೆ ಹೆದರದೆ ಹೋರಾಟ ಮುಂದುವರಿಸಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಪ್ರಕರಣವನ್ನು 2021ರಲ್ಲೇ ರಾಜ್ಯಪಾಲರು ತಿರಸ್ಕರಿಸಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದೂವರೆ ವರ್ಷದ ಬಳಿಕ ಜ್ಞಾನೋದಯವಾಗಿದೆ. ಇದು ದ್ವೇಷದ ರಾಜಕಾರಣ ಎನ್ನುವುದರಲ್ಲಿ ಅನುಮಾನವಿಲ್ಲ. ರಾಜ್ಯಪಾಲರು ಈ ಪ್ರಕರಣ ತಿರಸ್ಕರಿಸಿದಾಗ ಸಿದ್ದರಾಮಯ್ಯ ವಿಪಕ್ಷದಲ್ಲಿದ್ದರು. ಆಗಲೇ ಅವರು ಅದನ್ನು ಪ್ರಶ್ನೆ ಮಾಡಿ ಕೋರ್ಟ್ಗೆ ಹೋಗಬಹುದಿತ್ತು ಎಂದು ಹೇಳಿದರು.
ಯಡಿಯೂರಪ್ಪ ಸಿಎಂ ಆಗಿದ್ದಾಗ ಕಾಂಗ್ರೆಸ್ಗೆ ಸ್ವಾರ್ಥದ ಕೆಲಸ ಮಾಡಿಸಿಕೊಳ್ಳಬೇಕಿತ್ತು. ಈಗ ಅದನ್ನು ಮತ್ತೆ ವಿವಾದ ಮಾಡುತ್ತಿದ್ದಾರೆಂದರೆ ಅದು ದ್ವೇಷದ ರಾಜಕಾರಣ. ನನ್ನ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ. ವಿಪಕ್ಷದವರನ್ನು ದ್ವೇಷಿಸುವ ರಾಜಕಾರಣವನ್ನು ಬಿಜೆಪಿ ಎಂದಿಗೂ ಮಾಡಿಲ್ಲ. ಆದರೆ ಇದು ಕಾಂಗ್ರೆಸ್ನ ಚಾಳಿ. ಎಷ್ಟೇ ಪ್ರಕರಣ ದಾಖಲಿಸಿದರೂ ಅದನ್ನು ಎದುರಿಸುತ್ತೇವೆ ಎಂದು ಹೇಳಿದರು.
ಮುಡಾದಲ್ಲಿ 14 ನಿವೇಶನ ಲೂಟಿ ಮಾಡಿದ ಪ್ರಕರಣ ಬಯಲಿಗೆ ಬಂದಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ಮಾಡಿದ್ದಾರೆ. ಈ ಹಿಂದೆಯೂ ಕಾಂಗ್ರೆಸ್ ಆಡಳಿತವಿತ್ತು. ಆಗೆಲ್ಲ ರಾಜ್ಯಪಾಲರ ಅಧಿಕಾರ ಮೊಟಕು ಮಾಡುವ ಕೆಲಸ ಮಾಡಲಿಲ್ಲ. ಇದೀಗ ಅಧಿಕಾರ ಕಿತ್ತುಕೊಳ್ಳುವ ನಿರ್ಣಯಗಳನ್ನು ಮಾಡಲಾಗಿದೆ. ಇದನ್ನು ಜನರು ಗಮನಿಸುತ್ತಿದ್ದು, ಮುಂದೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಅಶೋಕ್ ಎಚ್ಚರಿಸಿದರು.