ಗೃಹ ಇಲಾಖೆಯನ್ನು ಯಾರು ನಿರ್ವಹಣೆ ಮಾಡುತ್ತಿದ್ದಾರೆ? : ಆರ್.ಅಶೋಕ್
"ಕಾಂಗ್ರೆಸ್ ಆಡಳಿತದ 20 ತಿಂಗಳಲ್ಲಿ 20 ಹಗರಣಗಳು ನಡೆದಿವೆ"

ಆರ್.ಅಶೋಕ್
ಬೆಂಗಳೂರು : ‘ವಿಜಯಪುರಲ್ಲಿ ಕಾರ್ಮಿಕನನ್ನು ನಡುರಸ್ತೆಯಲ್ಲಿಯೇ ಅಮಾನವೀಯವಾಗಿ ಥಳಿಸುತ್ತಿರುವ ವಿಡಿಯೋ ಮಾಧ್ಯಮಗಳಲ್ಲಿ ನೋಡಿದೆ. ಬೀದಿಯಲ್ಲೇ ನಿಂತು ರಾಜಾರೋಷವಾಗಿ ಹೊಡೆಯುತ್ತಿದ್ದಾರೆಂದರೆ ರಾಜ್ಯದಲ್ಲಿರುವ ದರೋಡೆಕೋರರಿಗೆ, ರೌಡಿಗಳಿಗೆ ಪೊಲೀಸರ ಬಗ್ಗೆ ಏನು ಸಂದೇಶ ಹೋಗುತ್ತಿದೆ?’ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಗೃಹ ಸಚಿವರು ಯಾರು ಎನ್ನುವುದೇ ಗೊತ್ತಾಗುತ್ತಿಲ್ಲ. ಎಲ್ಲ ಸಚಿವರು ಗೃಹ ಇಲಾಖೆಯಲ್ಲಿ ಕೈಯಾಡಿಸುತ್ತಿದ್ದಾರೆ. ಭ್ರಷ್ಟಾಚಾರ ಹಾಗೂ ಲಂಚಾವತಾರ ಮಿತಿ ಮೀರಿದೆ. ಶೇ.60ರಷ್ಟು ಕಮಿಷನ್ ಕೊಟ್ಟರೆ ಮಾತ್ರ ಈ ಸರಕಾರದಲ್ಲಿ ಕಡತ(ಫೈಲ್)ಗಳು ಚಲನೆ ಆಗುತ್ತವೆ ಎಂದು ದೂರಿದರು.
ಹಾಡಹಗಲೇ ಬ್ಯಾಂಕ್ ದರೋಡೆ, ಎಟಿಎಂ ತುಂಬಿಸಲು ತೆಗೆದುಕೊಂಡು ಹೋಗುತ್ತಿದ್ದ ಹಣ ದರೋಡೆ ನಡೆಯುತ್ತಿದೆ. ಇಷ್ಟೆಲ್ಲಾ ಆದರೂ ರಾಜ್ಯ ಸರಕಾರ ಸುಮ್ಮನೆ ಕುಳಿತಿದೆ. ಇದೊಂದು ಕುಂಭಕರ್ಣ ಸರಕಾರ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂಬುದಕ್ಕೆ ಇದು ಉದಾಹರಣೆ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಆಡಳಿತದ 20 ತಿಂಗಳಲ್ಲಿ 20 ಹಗರಣಗಳು ನಡೆದಿವೆ. ಬೆಳಗಾವಿ ಅಧಿವೇಶನದಲ್ಲಿ ಸಿ.ಟಿ.ರವಿ ಮೇಲಿನ ಹಲ್ಲೆ ಪ್ರಕರಣವನ್ನು ಯಾರು ನಿರ್ವಹಣೆ ಮಾಡುತ್ತಿದ್ದಾರೆ? ಜಿಲ್ಲಾ ಉಸ್ತುವಾರಿ ಸಚಿವರು ತಾವು ನಿರ್ವಹಿಸುತ್ತಿಲ್ಲ ಎನ್ನುತ್ತಿದ್ದಾರೆ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನಾನು ಹ್ಯಾಂಡಲ್ ಮಾಡುತ್ತಿಲ್ಲ ಎನ್ನುತ್ತಿದ್ದಾರೆ. ಡಾ. ಪರಮೇಶ್ವರ್ ನನಗೆ ವಿಷಯ ಗೊತ್ತಿಲ್ಲ ಎಂದಿದ್ದಾರೆ. ಗೃಹ ಇಲಾಖೆಯನ್ನು ಯಾರು ಹ್ಯಾಂಡಲ್ ಮಾಡುತ್ತಿದ್ದಾರೆ? ಎಂದು ಅವರು ಕೇಳಿದರು.
ಕಾಂಗ್ರೆಸ್ ಎಂದರೆ ಶೇ.60ರಷ್ಟು ಕಮಿಷನ್ ಸರಕಾರ. ಎಲ್ಲ ಇಲಾಖೆಗಳಲ್ಲೂ ಶೇ.60ರಷ್ಟು ಕಮಿಷನ್ ಪಡೆಯುತ್ತಿದ್ದಾರೆ. ಮುಡಾದಲ್ಲಿ 3ಸಾವಿರ ಕೋಟಿ ರೂ.ಗೂ ಹೆಚ್ಚು ಹಾಗೂ ವಾಲ್ಮೀಕಿ ನಿಗಮದಲ್ಲಿ 197 ಕೋಟಿ ರೂ.ಹಗರಣ ಆಗಿದೆ. ಈ ಎಲ್ಲ ಹಣ ಈಗ ಬೆಳಗಾವಿಯ ಕಾಂಗ್ರೆಸ್ ಸಮಾವೇಶಕ್ಕೆ ಬಳಕೆಯಾಗಿದೆ. ಕಾಂಗ್ರೆಸ್ನವರು ಕರ್ನಾಟಕವನ್ನು ಲೂಟಿ ಮಾಡಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ಅನುದಾನ ನೀಡುತ್ತಿಲ್ಲವೆಂದು ಸಂಪುಟ ಸಭೆಯಲ್ಲಿ ಗಲಾಟೆಯಾಗಿದೆ. ಕಾಂಗ್ರೆಸ್ ಶಾಸಕರು ಪಕ್ಷ ಬಿಡಲು ಸಿದ್ಧರಾಗಿದ್ದಾರೆ. ಎರಡು ವರ್ಷಗಳ ಹಿಂದೆ 15 ಶಾಸಕರು ನಮ್ಮ ಪಕ್ಷಕ್ಕೆ ಬಂದಿದ್ದರು. ಈಗಲೂ ಅದೇ ಪರಿಸ್ಥಿತಿಯಿದೆ. ಮೊದಲು ಅವರ ಪಕ್ಷದಲ್ಲಿರುವ ಸಮಸ್ಯೆ ಬಗೆಹರಿಸಿಕೊಳ್ಳಲಿ ಎಂದು ಅಶೋಕ್ ಸಲಹೆ ನೀಡಿದರು.
ನಕಲಿ ಗಾಂಧಿಗಳು: ದೇಶಕ್ಕೆ ಸ್ವಾತ್ರಂತ್ಯ ತಂದುಕೊಟ್ಟವರು ಮಹಾತ್ಮ ಗಾಂಧಿ. ಅವರೇ ನಿಜವಾದ ಗಾಂಧಿ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಇವರೆಲ್ಲಾ ನಕಲಿ ಗಾಂಧಿಗಳು ಎಂದು ಲೇವಡಿ ಮಾಡಿದ ಅವರು, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಘಟನೆ ಮಾಸುವ ಮುನ್ನವೇ, ಹೊನ್ನಾವರದಲ್ಲಿ ಗರ್ಭಿಣಿ ಹಸುವನ್ನು ಕೊಲ್ಲಲಾಗಿದೆ. ಕರ್ನಾಟಕದಲ್ಲಿ ಗೋವುಗಳಿಗೆ ರಕ್ಷಣೆ ಇಲ್ಲ ಎಂಬುದು ಇದರಿಂದ ಸಾಬೀತಾಗಿದೆ ಎಂದು ದೂರಿದರು.