ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಿ : ಆರ್.ಅಶೋಕ್ ಆಗ್ರಹ

ಬೆಂಗಳೂರು : ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆಯೇ, ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ ಮಾಡಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಶನಿವಾರ ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಐದು ದಿನಗಳಿಂದ ಧರಣಿ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರು, ಪ್ರತಿಭಟನೆ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದು, ಗಂಟು-ಮೂಟೆ ಕಟ್ಟಿಕೊಂಡು ಮನೆಗೆ ಹೋಗಿ ಎಂದು ಬೆದರಿಸುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ನ್ಯಾಯಯುತವಾಗಿ ಪ್ರತಿಭಟನೆ ಮಾಡಲು ಅವರಿಗೆ ಅವಕಾಶ ನೀಡುತ್ತಿಲ್ಲ. ಕುಡಿಯುವ ನೀರು, ಶೌಚಾಲಯ, ಟೆಂಟ್ ಮೊದಲಾದ ಸೌಲಭ್ಯ ನೀಡುತ್ತಿಲ್ಲ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ 15ಸಾವಿರ ರೂ. ಹಾಗೂ ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ 7ಸಾವಿರ ರೂ. ನೀಡಲಾಗುವುದು ಎಂದು ಘೋಷಿಸಲಾಗಿದೆ. ಅದರಂತೆಯೇ ಸರಕಾರ ಗೌರವಧನ ನೀಡಲಿ ಎಂದು ಆಗ್ರಹಿಸಿದರು.
ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆಗೆ ಬಿಜೆಪಿ ಬೆಂಬಲ ನೀಡುತ್ತಿದೆ. ಅವರನ್ನು ಕರೆದು ಮಾತನಾಡಿ ಭರವಸೆ ನೀಡಲಿ. ಇಲ್ಲದಿದ್ದರೆ ಸರಕಾರದ ವಿರುದ್ಧ ಹೋರಾಟ ಮಾಡಲಾಗುವುದು. ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರತಿಭಟಿಸಲು ಅವಕಾಶ ನೀಡದೇ ಇದ್ದಲ್ಲಿ ನಾನೇ ಬಂದು ಪ್ರತಿಭಟನೆಗೆ ಕೂರುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಸಿಎಂ ಸಿದ್ದರಾಮಯ್ಯ ಯಾವ ಇಲಾಖೆಯಲ್ಲೂ ಹುದ್ದೆ ಭರ್ತಿ ಮಾಡಿಲ್ಲ. ಆದರೆ ಅವರ ಜೇಬು ಮಾತ್ರ ಭರ್ತಿಯಾಗುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಭರವಸೆ ನೀಡಿದಂತೆಯೇ ಗೌರವಧನ ಹೆಚ್ಚಳ ಮಾಡಲು ಏಕೆ ಸಾಧ್ಯವಿಲ್ಲ? ಬೇರೆ ರಾಜ್ಯದ ಸಂತ್ರಸ್ತರಿಗೆ ಪರಿಹಾರ ನೀಡಲು ಹಣವಿದೆ. ಆದರೆ ಕಾರ್ಯಕರ್ತೆಯರಿಗೆ ಹಣ ನೀಡುವಾಗ ಖಜಾನೆ ಖಾಲಿಯಾಗಿದೆ ಎಂದು ಅವರು ಟೀಕಿಸಿದರು.
ಇನ್ನು ಮೇಲೆ ‘ಉಚಿತ’ ಕೊಡಲು ಸಾಧ್ಯವಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಜನರ ಮೇಲೆ ತೆರಿಗೆ ಹೇರಲಾಗಿದೆ. ಪೆಟ್ರೋಲ್-ಡೀಸೆಲ್ ದರ ಹೆಚ್ಚಿಸಲಾಗಿದೆ. ಇಷ್ಟೆಲ್ಲ ಆದಾಯ ಬಂದರೂ ಕಾರ್ಯಕರ್ತೆಯರಿಗೆ ಸಹಾಯ ಮಾಡಿಲ್ಲ. ಸಿದ್ದರಾಮಯ್ಯ ಹೇಗೂ ನಿರ್ಗಮಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಜನರಿಗೆ ಸಹಾಯ ಮಾಡಲಿ ಎಂದು ಅವರು ಸಲಹೆ ನೀಡಿದರು.