ಬಾರ್ಗಳನ್ನು ಮುಚ್ಚಲ್ಲ, ವಿವಿಗಳನ್ನು ಮುಚ್ಚುತ್ತಾರೆ : ಆರ್.ಅಶೋಕ್ ಆಕ್ರೋಶ
"ಕಾಂಗ್ರೆಸ್ ಸರಕಾರದಿಂದ ವಿಶ್ವವಿದ್ಯಾಲಯ ಮುಚ್ಚುವ ಭಾಗ್ಯ"

ಆರ್.ಅಶೋಕ್
ಬೆಂಗಳೂರು : ಸಿಎಂ ಸಿದ್ದರಾಮಯ್ಯನವರು ರಾಜ್ಯಕ್ಕೆ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಭಾಗ್ಯ ನೀಡಿದ್ದಾರೆ. ಇದರಿಂದಾಗಿ ನಮ್ಮ ರಾಜ್ಯದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಪಕ್ಕದ ರಾಜ್ಯಕ್ಕೆ ವಲಸೆ ಹೋಗಬೇಕಾಗುತ್ತದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ಹೊರಹಾಕಿದರು.
ವಿಧಾನಸೌಧದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ವಿಶ್ವವಿದ್ಯಾಲಯಗಳನ್ನು ಮುಚ್ಚಿಸುವ ಭಾಗ್ಯವನ್ನು ಕಾಂಗ್ರೆಸ್ ನೀಡಿದೆ. ಕಿಸಾನ್ ಸಮ್ಮಾನ್, ವಿದ್ಯಾನಿಧಿ ಸೇರಿದಂತೆ ಅನೇಕ ಯೋಜನೆಗಳನ್ನು ಮುಚ್ಚಿ ಹಾಕಲಾಗಿದೆ. ಈಗ ಮಾರಿ ಕಣ್ಣು ಹೋರಿ ಮೇಲೆ ಎಂಬಂತೆ, ಸಿಎಂ ಸಿದ್ದರಾಮಯ್ಯನವರ ಕಣ್ಣು ವಿಶ್ವವಿದ್ಯಾಲಯಗಳ ಮೇಲೆ ಬಿದ್ದಿದೆ. ಯುವಜನರು ಪದವೀಧರರಾಗುವುದನ್ನು ತಪ್ಪಿಸಲು ಈ ರೀತಿ ಮಾಡಲಾಗಿದೆ. ಯಾರೂ ಪದವೀಧರರಾಗದೇ ಇದ್ದಲ್ಲಿ ಯುವನಿಧಿ ಯೋಜನೆಯನ್ನು ನಿಲ್ಲಿಸಬಹುದು ಎಂಬುದು ಇವರ ಚಿಂತನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೇರೆ ರಾಜ್ಯ, ದೇಶಗಳ ವಿದ್ಯಾರ್ಥಿಗಳು ನಮ್ಮ ರಾಜ್ಯದ ವಿಶ್ವವಿದ್ಯಾಲಯಗಳಿಗೆ ಬರುತ್ತಿದ್ದಾರೆ. ಮಂಡ್ಯದ ವಿಶ್ವವಿದ್ಯಾಲಯವನ್ನು ಮುಚ್ಚಿ, ಅಮ್ಯೂಸ್ಮೆಂಟ್ ಪಾರ್ಕ್ ಹಾಗೂ ಜಲಕ್ರೀಡೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಹೆಚ್ಚು ಕನ್ನಡಿಗರು ಇರುವ ಮಂಡ್ಯದಲ್ಲೇ ಶಿಕ್ಷಣಕ್ಕೆ ಕೊಡಲಿ ಪೆಟ್ಟು ಹಾಕಲಾಗಿದೆ. ಉಪನ್ಯಾಸಕರ ನೇಮಕವಿಲ್ಲ, ಅತಿಥಿ ಉಪನ್ಯಾಸರಿಗೆ ವೇತನ ಇಲ್ಲ, ಹೊಸ ಶಿಕ್ಷಣ ನೀತಿ ಜಾರಿಯಾಗಿಲ್ಲ, ಶಾಲಾ ಕೊಠಡಿಗಳ ದುರಸ್ಥಿಗೆ ಹಣವಿಲ್ಲ, ಪಠ್ಯಪುಸ್ತಕ-ಸಮವಸ್ತ್ರ ನೀಡಲು ಕಾಸಿಲ್ಲ. ಹೊಸ ಕಾಲೇಜುಗಳನ್ನು ಎಲ್ಲೂ ಆರಂಭಿಸಿಲ್ಲ. 4 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸುವಾಗ, ಅದರಲ್ಲಿ 342 ಕೋಟಿ ರೂ. ಕೊಟ್ಟರೆ ಸಾಕು. ಇಷ್ಟು ಹಣ ಕೊಡಲಾಗದೇ ಇದ್ದಲ್ಲಿ, ಮತ್ತೇಕೆ ಬಜೆಟ್ ಮಂಡಿಸಬೇಕು? 3 ಸಾವಿರ ಬಾರ್ಗಳನ್ನು ಮುಚ್ಚುವುದಿಲ್ಲ. ಆದರೆ ವಿವಿಗಳನ್ನು ಮಾತ್ರ ಮುಚ್ಚಲಾಗುತ್ತಿದೆ ಎಂದರು.
ಇದರಿಂದಾಗಿ ನಮ್ಮ ರಾಜ್ಯದ ವಿದ್ಯಾರ್ಥಿಗಳು ಬೇರೆ ರಾಜ್ಯಗಳ ವಿವಿಗಳಿಗೆ ವಲಸೆ ಹೋಗುತ್ತಾರೆ. ಇಲ್ಲಿ ಪ್ರತಿಭಾವಂತರು ಸಿಗುತ್ತಾರೆ ಎಂಬ ಕಾರಣಕ್ಕೆ ಇನ್ವೆಸ್ಟ್ ಕರ್ನಾಟಕಕ್ಕೆ ಎಲ್ಲರೂ ಬರುತ್ತಾರೆ. ವಿದ್ಯಾರ್ಥಿಗಳೇ ಇಲ್ಲವೆಂದ ಮೇಲೆ ಯಾವ ಉದ್ಯಮಿಗಳು ಇಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರುತ್ತಾರೆ ಎಂದು ಪ್ರಶ್ನೆ ಮಾಡಿದರು.
ಗಲಭೆ ಪೂರ್ವನಿಯೋಜಿತ :
ಮೈಸೂರಿನಲ್ಲಿ ನಡೆದ ಗಲಭೆ ಪೂರ್ವನಿಯೋಜಿತವಾಗಿದೆ. ಮೂಟೆಗಳಲ್ಲಿ ಕಲ್ಲುಗಳನ್ನು ತಂದು ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ. ಇಷ್ಟೊಂದು ಮೂಟೆಗಳನ್ನು ತರಲು ಸಮಯಬೇಕಾಗುತ್ತದೆ. ಆದರೆ ಸಚಿವ ರಾಜಣ್ಣ ಪೊಲೀಸರನ್ನು ನಿಂದಿಸಿದರೆ, ಡಿಸಿಎಂ ಡಿ.ಕೆ.ಶಿವಕುಮಾರ್ ಪೊಲೀಸರನ್ನು ಶ್ಲಾಘಿಸಿದ್ದಾರೆ. ಆದರೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನಿರ್ಲಿಪ್ತ ಮನಸ್ಥಿತಿ ಹೊಂದಿದ್ದಾರೆ. ಮಕ್ಕಳು ಕಲ್ಲು ಹೊಡೆದಿದ್ದು, ಹಿರಿಯರು ಸಮಾಧಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಈ ರೀತಿಯಲ್ಲೇ ಚಿಂತಿಸಬೇಕು ಎಂದು ಕಾಂಗ್ರೆಸ್ ನಾಯಕರು ಮೊದಲೇ ಹೇಳಿಬಿಡುತ್ತಾರೆ ಎಂದು ದೂರಿದರು.
ಹುಬ್ಬಳ್ಳಿಯಲ್ಲಾದ ಗಲಭೆಯ ಪ್ರಕರಣವನ್ನು ಕೈ ಬಿಡಲಾಗಿದೆ. ಭಗವಾನ್ ಎಂಬ ಚಿಂತಕ ಶ್ರೀರಾಮನ ಬಗ್ಗೆ ಹೀನಾಯವಾಗಿ ಮಾತಾಡಿದರೂ ಹಿಂದೂಗಳು ಎಂದೂ ಕಲ್ಲು ಹೊಡೆದಿಲ್ಲ. ಕಾನೂನು ಕಾಪಾಡಬೇಕಾದ ಪೊಲೀಸರ ಕೈಯನ್ನು ಸರಕಾರವೇ ಕೈ ಕಟ್ಟಿ ಹಾಕಿದೆ. ಪೊಲೀಸರನ್ನೇ ತಪ್ಪಿತಸ್ಥರನ್ನಾಗಿ ಮಾಡಿದ್ದು, ಇನ್ನು ಯಾರನ್ನಾದರೂ ಅಮಾನತು ಮಾಡುತ್ತಾರೆ. ಪೊಲೀಸರ ಆತ್ಮಸ್ಥೈರ್ಯವನ್ನು ಕುಗ್ಗಿಸಲಾಗಿದೆ ಎಂದರು.
ಹೊಸ ಹುದ್ದೆ ಸೃಷ್ಟಿಸಿಲ್ಲ :
ಮಾಜಿ ಸಚಿವ, ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, 8 ವಿಶ್ವವಿದ್ಯಾಲಯಗಳನ್ನು ಮುಚ್ಚುವ ಸರಕಾರದ ನಿರ್ಧಾರದಿಂದ ಪ್ರಗತಿಗೆ ಹಿನ್ನಡೆಯಾಗಲಿದೆ. ಕಾಂಗ್ರೆಸ್ನಿಂದ ಎಲ್ಲ ಕ್ಷೇತ್ರಗಳಲ್ಲಿ ಹಿನ್ನಡೆಯಾಗಿದೆ. ಈ ತೀರ್ಮಾನದಿಂದ ಯುವಜನರ ಶೈಕ್ಷಣಿಕ ಪ್ರಗತಿಗೆ ತೊಂದರೆಯಾಗಲಿದೆ. ಸಿಎಂ ಸಿದ್ದರಾಮಯ್ಯನವರು ಬಜೆಟ್ ಮಂಡಿಸುವಾಗ ಡಾ.ಬಿ.ಆರ್.ಅಂಬೇಡ್ಕರ್ರ ಸಂವಿಧಾನದ ಆಶಯ, ವಚನಕಾರರ ಮಾತುಗಳನ್ನು ಹೇಳಿದ್ದರು. ಆದರೆ ಈಗ ವಿವಿಗಳನ್ನು ಮುಚ್ಚಲಾಗುತ್ತಿದೆ. ಯುವಜನರಿಗೆ ಸಮಾನ ಅವಕಾಶ ದೊರೆಯಲು ಗುಣಮಟ್ಟದ ಶಿಕ್ಷಣ ನೀಡಬೇಕು. ಜಿಲ್ಲೆಗಳು ರೂಪುಗೊಂಡು ಹಲವಾರು ವರ್ಷಗಳಾದರೂ ಅಲ್ಲಿ ಪ್ರತ್ಯೇಕ ವಿವಿಗಳಿಲ್ಲ. ಹಣ ಇಲ್ಲ ಎಂಬ ನೆಪವೊಡ್ಡಿ ವಿವಿಗಳನ್ನು ಮುಚ್ಚಲಾಗುತ್ತಿದೆ. ಬಿಜೆಪಿ ಸರಕಾದಲ್ಲಿ ವಿವಿಗಳನ್ನು ರೂಪಿಸುವಾಗ, ಹೊಸ ಹುದ್ದೆಗಳನ್ನು ಸೃಷ್ಟಿಸಿಲ್ಲ. ಇರುವ ಹುದ್ದೆಗಳನ್ನೇ ವರ್ಗಾಯಿಸಲಾಗಿದೆ ಎಂದು ವಿವರಿಸಿದರು.
2021ರ ಪ್ರಕಾರ, ಕಾಲೇಜುಗಳ ಪ್ರವೇಶಾತಿ ಪ್ರಮಾಣ ಸರಾಸರಿ ಶೇ.33 ಇದೆ. ಚಾಮರಾಜನಗರದಲ್ಲಿ ಶೇ.10, ಮಂಡ್ಯದಲ್ಲಿ ಶೇ.15, ಬಾಗಲಕೋಟೆಯಲ್ಲಿ ಶೇ.16 ಇದೆ. ಇಂತಹ ಸ್ಥಿತಿಯಲ್ಲಿ ಯುವಜನರನ್ನು ಶಿಕ್ಷಣ ವಂಚಿತರನ್ನಾಗಿ ಮಾಡಲಾಗುತ್ತಿದೆ. ವಿವಿಗಳಿಂದ ಆದಾಯ ಬರಲು ಇದು ಅಂಗಡಿಗಳಲ್ಲ. ಶಿಕ್ಷಣ ನೀಡುವುದು ಸರಕಾರದ ಕರ್ತವ್ಯ. ಈ ಕ್ರಮ ಕೈಗೊಳ್ಳುವ ಮುನ್ನ ಸರಕಾರ ಯಾವುದೇ ಪರಿಶೀಲನೆ ಮಾಡಿ ವರದಿ ರೂಪಿಸಿಲ್ಲ. ಬಿಜೆಪಿ ಅವಧಿಯಲ್ಲಿ ರೂಸಾ ಯೋಜನೆಯಡಿ ಅನುದಾನ ಪಡೆದು ಮಹಾರಾಣಿ ಕ್ಲಸ್ಟರ್, ಮಂಡ್ಯ ವಿವಿ ರೂಪಿಸಲಾಗಿದೆ. ಇದು ರಾಜಕೀಯ ಪ್ರೇರಿತ ಎಂದು ದೂರಿದರು.
ರಿಯಲ್ ಎಸ್ಟೇಟ್ ಸರಕಾರ :
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಮೊದಲು ಒತ್ತು ನೀಡಿದ್ದು ಶಿಕ್ಷಣಕ್ಕೆ. ಕಾಂಗ್ರೆಸ್ ಸರಕಾರ ಅಕ್ಕಿ ನೀಡುವ ಮೊದಲು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. 4 ಲಕ್ಷ ಕೋಟಿ ರೂ. ಬಜೆಟ್ ಮಂಡಿಸುವ ಸರಕಾರಕ್ಕೆ 350 ಕೋಟಿ ರೂ. ಅನುದಾನ ನೀಡಲು ಆಗಲ್ಲ. ಕೇಂದ್ರ ಸರಕಾರ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಆದರೆ ಕಾಂಗ್ರೆಸ್ ಸರಕಾರಕ್ಕೆ ಶಿಕ್ಷಣಕ್ಕಿಂತ ರಿಯಲ್ ಎಸ್ಟೇಟ್ ಮುಖ್ಯ ಎಂದರು.