ಬಿಬಿಎಂಪಿ ಚುನಾವಣೆ ನಡೆಸಲು ಆರ್.ಅಶೋಕ್ ಒತ್ತಾಯ

ಆರ್.ಅಶೋಕ್
ಬೆಂಗಳೂರು : ಬೆಂಗಳೂರಿನ ಅಭಿವೃದ್ಧಿಗಾಗಿ ಆದಷ್ಟು ಬೇಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆ ನಡೆಸಬೇಕು. ಇದಕ್ಕಾಗಿ ನ್ಯಾಯಾಲಯದಲ್ಲಿ ವಾದ ಮಾಡಲು ತಜ್ಞರ ತಂಡ ರಚಿಸಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದರು.
ಗುರುವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬಿಬಿಎಂಪಿ ಚುನಾವಣೆ ಹಾಗೂ ಬೆಂಗಳೂರಿನ ಅಭಿವೃದ್ಧಿ ಕುರಿತು ನಡೆದ, ಬಿಜೆಪಿ ಶಾಸಕರು, ಮುಖಂಡರ ಸಭೆಯಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಆದಷ್ಟು ಬೇಗ ಚುನಾವಣೆ ನಡೆಸಬೇಕು ಎಂದು ಸರಕಾರಕ್ಕೆ ಒತ್ತಾಯಿಸುತ್ತೇವೆ. ಈ ಸಂಬಂಧ ನ್ಯಾಯಾಲಯದಲ್ಲಿ ವಾದ ಮಾಡಲು 15 ತಜ್ಞರ ತಂಡವನ್ನು ರಚಿಸಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬೆಂಗಳೂರಿನ ಅಭಿವೃದ್ಧಿ ಸೊನ್ನೆಯಾಗಿದೆ. ರಸ್ತೆಗುಂಡಿಗಳ ಆಕಾರ ಸೊನ್ನೆಯಾಗಿರುವಂತೆಯೇ ಅಭಿವೃದ್ಧಿಯೂ ಸೊನ್ನೆಯೇ ಆಗಿದೆ. ರಸ್ತೆಗುಂಡಿಗಳಿಂದ ಬಿದ್ದು ಗಾಯಕ್ಕೊಳಗಾಗಿ ಜನರು ಆಸ್ಪತ್ರೆ ಸೇರುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಎಲ್ಲ ಕಡೆ ಕಸದ ರಾಶಿ ಕಂಡು ಬರುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಹಿಮಾಲಯದ ಶಿಖರದಂತೆ ನಗರದ ಅಭಿವೃದ್ಧಿಯನ್ನು ಬ್ರ್ಯಾಂಡ್ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು. ಈಗ ಅವರೇ ಬೆಂಗಳೂರನ್ನು ಉದ್ಧಾರ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದರ ವಿರುದ್ಧ ಹೋರಾಟ ರೂಪಿಸಲು ಸಭೆ ನಡೆಸಲಾಗಿದೆ ಎಂದು ಅಶೋಕ್ ತಿಳಿಸಿದರು.
ಬಿಬಿಎಂಪಿ ಚುನಾವಣೆ ನಡೆಸುವ ಮನಸ್ಸಿಲ್ಲದ ಸರಕಾರ, ಗ್ರೇಟರ್ ಬೆಂಗಳೂರು ರಚಿಸುತ್ತೇವೆ, ಇನ್ನಷ್ಟು ಪ್ರದೇಶಗಳನ್ನು ಬೆಂಗಳೂರಿಗೆ ಸೇರಿಸುತ್ತೇವೆ ಎಂದು ಹೇಳುತ್ತಿದೆ. ಇರುವ ನಗರವನ್ನೇ ಸುಧಾರಣೆ ಮಾಡಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇನ್ನು ಹೊಸ ಪ್ರದೇಶಗಳ ಅಭಿವೃದ್ಧಿ ಹೇಗೆ ಸಾಧ್ಯ? ಬೆಂಗಳೂರನ್ನು ಒಡೆದರೆ ನಾಡಪ್ರಭು ಕೆಂಪೇಗೌಡರಿಗೆ ಅಪಮಾನ ಮಾಡಿದಂತಾಗುತ್ತದೆ. ಕೆಂಪೇಗೌಡರನ್ನು ನಂಬುವ ಜನರ ಮನಸ್ಸಿಗೆ ನೋವಾಗುತ್ತದೆ ಎಂದು ಅವರು ಹೇಳಿದರು.
ಈಗ 198 ವಾರ್ಡ್ಗಳಿಗೆ ಚುನಾವಣೆ ನಡೆಸಿದರೆ ಸಾಕು. ರಸ್ತೆ ಮೇಲ್ಭಾಗದಲ್ಲೇ ಸುರಂಗ ನಿರ್ಮಾಣವಾಗುತ್ತಿರುವಾಗ 150 ಅಡಿ ಕೆಳಗೆ ಸುರಂಗ ಕೊರೆಯಲು ಹೊರಟಿದ್ದಾರೆ. ಡಿ.ಕೆ.ಶಿವಕುಮಾರ್ ಹೇಳಿಕೆಗಳಿಂದ ಜನರು ರೊಚ್ಚಿಗೆದ್ದಿದ್ದಾರೆ. ಬೆಂಗಳೂರು ಇಂದು ಸರಿಹೋಗಲಿದೆ ಎಂದು ಜನರು ಕಾಯುತ್ತಿದ್ದಾರೆ. ಬೆಂಗಳೂರಿಗೆ ಬೆಂಗಳೂರಿನವರೇ ಆದ ಸಚಿವರಿಲ್ಲ. ಬೇರೆ ಜಿಲ್ಲೆಯ ಸಚಿವರಿಗೆ ನಗರದ ಬಗ್ಗೆ ಆಸಕ್ತಿ ಇಲ್ಲ. ಸರಕಾರದಿಂದಾಗಿ ಬೆಂಗಳೂರು ಅನಾಥವಾಗಿದೆ ಎಂದು ಅಶೋಕ್ ದೂರಿದರು.
ಬೆಂಗಳೂರು ಮಾಫಿಯಾಗಳ ಕೈಗೆ ಸಿಲುಕಿದೆ. ಡಾನ್ಗಳ ಕೈಗೆ ಸಿಕ್ಕಿದೆ. ಮೈಸೂರು ಗಲಭೆ, ಬೆಂಗಳೂರಿನ ಬಾಂಬ್ ಬ್ಲಾಸ್ಟ್, ಅತ್ಯಾಚಾರ ಮೊದಲಾದ ಅಪರಾಧಿ ಚಟುವಟಿಕೆ ನಡೆಯುತ್ತಿದೆ. ಜನರೇ ಸ್ವತಃ ಆತ್ಮರಕ್ಷಣೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ. ಕಾಂಗ್ರೆಸ್ ನಾಯಕರು ಇನ್ನೂ ಗ್ಯಾರಂಟಿಗಳ ಗುಂಗಿನಲ್ಲೇ ಇದ್ದಾರೆ. ಕೊಲೆ, ಸುಲಿಗೆ ನಿರಂತರವಾಗಿದ್ದು, ಈ ಸರಕಾರ ತೊಲಗಿದರೆ ಸಾಕು ಎಂದು ಜನರು ಹೇಳುತ್ತಿದ್ದಾರೆ ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನ ಜವಾಬ್ದಾರಿ ವಹಿಸಿಲ್ಲ. ಡಿ.ಕೆ.ಶಿವಕುಮಾರ್ ದೇವರ ಮೊರೆ ಹೋಗಿ, ನಗರವನ್ನು ದೇವರಿಗೆ ಅರ್ಪಣೆ ಮಾಡಿದ್ದಾರೆ. ರಾಜಧಾನಿಯನ್ನು ದೇವರೇ ಕಾಪಾಡಬೇಕಿದೆ. ಬೆಂಗಳೂರಿನ ಉಸ್ತುವಾರಿಯನ್ನು ಯಾರಾದರೂ ವಹಿಸಲಿ. ಆದರೆ ಬೆಂಗಳೂರನ್ನು ಉದ್ಧಾರ ಮಾಡುವವರು, ನಗರದ ಬಗ್ಗೆ ಜ್ಞಾನ ಇರುವವರು ಸಚಿವರಾಗಲಿ ಎಂದು ಅಶೋಕ್ ಆಗ್ರಹಿಸಿದರು.