ರಾಜ್ಯಪಾಲರ ಬಜೆಟ್ ಭಾಷಣವು ‘ಆಕ್ಸ್‌ಫರ್ಡ್ ವಿ.ವಿ. ಬ್ಲಾಗ್‍ನ ಲೇಖನದಂತಿದೆ’ ; ಸದನದಲ್ಲಿ ಚರ್ಚೆಗೆ ಗ್ರಾಸವಾದ ಆರ್.ಅಶೋಕ್ ಆರೋಪ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯರ ಕಚೇರಿಯಲ್ಲಿ ಕೆಲಸ ಮಾಡಿದ್ದ ವ್ಯಕ್ತಿಯೊಬ್ಬರು ಆಕ್ಸ್ ಫರ್ಡ್ ವಿ.ವಿ. ಬ್ಲಾಗ್‍ನಲ್ಲಿ ರಾಜ್ಯ ಸರಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬರೆದ ಲೇಖನವನ್ನು ಬಜೆಟ್ ಭಾಷಣದಲ್ಲಿ ರಾಜ್ಯಪಾಲರಿಂದ ಓದಿಸಿದ್ದಾರೆ ಎಂಬ ವಿಪಕ್ಷದ ನಾಯಕ ಆರ್.ಅಶೋಕ್ ಆರೋಪ ಗುರುವಾರ ಸದನದಲ್ಲಿ ಕೆಲಕಾಲ ಚರ್ಚೆಗೆ ಗ್ರಾಸವಾಯಿತು.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತಿಗಿಳಿದ ಆರ್.ಅಶೋಕ್, ಹೀಗೆ ಹೊಗಳುಭಟ್ಟರಿಂದ ಶಹಬ್ಬಾಸ್‍ಗಿರಿ ತೆಗೆದುಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ವ್ಯಂಗ್ಯವಾಡಿದರು.
ಆಕ್ಸ್‍ಫರ್ಡ್ ವಿ.ವಿ. ಬ್ಲಾಗ್‍ನಲ್ಲಿ ಬರೆದ ಲೇಖನವನ್ನು ಮುಂದಿಟ್ಟುಕೊಂಡು ರಾಜ್ಯಪಾಲರ ಭಾಷಣದಲ್ಲಿ ಓದಿಸಲಾಗಿದೆ. ನಾನು ಈ ಲೇಖನ ಯಾರದ್ದು ಎಂದು ಹುಡುಕಿದೆ. ಆದರೆ, ಇವರು ಋಣ ಸಂದಾಯದ ವ್ಯಕ್ತಿ. ವಿ.ವಿ.ಯ ಕುಲಪತಿ ಆಗಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯರ ಕಚೇರಿಯಲ್ಲಿ ಕೆಲಸ ಮಾಡಿದ್ದ ವ್ಯಕ್ತಿಯಾಗಿದ್ದಾರೆ. ಅವರ ಪ್ರೊಫೈಲ್ ಅನ್ನು ಪರಿಶೀಲನೆ ಮಾಡಿದೆ. ಈ ವೇಳೆ ಅವರೊಬ್ಬರು ವಕೀಲ ಎಂದು ತಿಳಿದುಬಂತು ಎಂದು ಆರ್.ಅಶೋಕ್ ವಿವರಿಸಿದರು.
ಲೇಖನ ಯಾರೂ ಬೇಕಾದರೂ ಬರೆಯಬಹುದು. ವಕೀಲರು, ಕಾನೂನು ರಚನೆ ಮಾಡುವವರು, ಸಮಾಜ ಸುಧಾಕರು, ಆರೋಗ್ಯ ತಜ್ಞರು ಬರೆಯಬಹುದಾಗಿದೆ. ಕನಿಷ್ಠ 500 ರಿಂದ 700 ಪದ ಇರಬೇಕು. ಅವರ ಲೇಖನವನ್ನು ಮುಂದಿಟ್ಟುಕೊಂಡು ರಾಜ್ಯಪಾಲರ ಭಾಷಣದಲ್ಲಿ ಓದಿಸಲಾಗಿದೆ ಎಂದು ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕೇಂದ್ರ ಸರಕಾರದ ಮೇಕ್ ಇನ್ ಇಂಡಿಯಾ ಸೇರಿದಂತೆ ಇತರ ವಿಚಾರಗಳ ಬಗ್ಗೆಯೂ ಇಂತಹ ಲೇಖನಗಳನ್ನು ಬರೆಯಲಾಗಿದೆ. ಆದರೆ, ಇದನ್ನು ತಾವು ಒಪ್ಪುತ್ತೀರಾ? ಎಂದು ಪ್ರಶ್ನಿಸಿದರು. ಈ ವೇಳೆ ಆಡಳಿತ ಮತ್ತು ವಿಪಕ್ಷಗಳ ನಡುವೆ ಬಿರುಸಿನ ಮಾತುಗಳು ನಡೆದವು.