ಪರೀಕ್ಷೆಯ ಪಾವಿತ್ರ್ಯ ದೊಡ್ಡ ಮಟ್ಟದಲ್ಲಿ ನಷ್ಟವಾಗಿದ್ದರೆ ಮಾತ್ರ ಮರುಪರೀಕ್ಷೆ ನಡೆಸಬಹುದು: ನೀಟ್ ವಿವಾದದ ಕುರಿತು ಸುಪ್ರೀಂ ಕೋರ್ಟ್
ಹೊಸದಿಲ್ಲಿ: ನೀಟ್-ಯುಜಿ 2024 ವಿವಾದದ ಕುರಿತ ಹಲವು ಅರ್ಜಿಗಳ ವಿಚಾರಣೆಯನ್ನು ಇಂದು ಸುಪ್ರೀಂ ಕೋರ್ಟ್ ನಡೆಸುತ್ತಿದ್ದು, ಪರೀಕ್ಷೆಯ ಪಾವಿತ್ರ್ಯತೆ ದೊಡ್ಡ ಮಟ್ಟದಲ್ಲಿ ಕಳೆದುಹೋಗಿದೆ ಎಂಬ ಕುರಿತು ದೃಢ ಪುರಾವೆಗಳು ದೊರೆತಲ್ಲಿ ಮಾತ್ರ ಮರುಪರೀಕ್ಷೆ ನಡೆಸಬಹುದು ಎಂದು ಹೇಳಿದೆ.
ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲ ಮತ್ತು ಮನೋಜ್ ಮಿಶ್ರಾ ಅವರ ಪೀಠ ನಡೆಸುತ್ತಿದೆ. ಈ ವಿಚಾರ ಸಾಮಾಜಿಕ ಪರಿಣಾಮಗಳನ್ನು ಬೀರುತ್ತಿದೆ ಎಂದು ಹೇಳಿದ ನ್ಯಾಯಾಲಯ, ಪ್ರಶ್ನೆ ಪತ್ರಿಕೆ ಸೋರಿಕೆ ಇಡೀ ಪರೀಕ್ಷೆಯನ್ನು ಬಾಧಿಸಿದೆ ಹಾಗೂ ಈ ಕಾರಣಕ್ಕೆ ಪರೀಕ್ಷೆಯನ್ನು ರದ್ದುಗೊಳಿಸುವ ಅಗತ್ಯವಿದೆ ಎಂಬುದಕ್ಕೆ ಪುರಾವೆಯನ್ನು ಒದಗಿಸುವಂತೆ ಅರ್ಜಿದಾರರಲ್ಲಿ ಕೇಳಿದೆ.
ಸುಮಾರು 40 ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ತನ್ನ ವಿರುದ್ಧ ವಿವಿಧ ಹೈಕೋರ್ಟ್‌ಗಳಲ್ಲಿ ದಾಖಲಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಬೇಕೆಂದು ಎನ್‌ಟಿಎ ಕೋರಿರುವ ಅರ್ಜಿಯೂ ಇವುಗಳಲ್ಲಿ ಸೇರಿದೆ.
ನೀಟ್‌ನಲ್ಲಿ ಮೊದಲ 100 ರ್ಯಾಂಕ್ ಪಡೆದವರು 18 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 56 ನಗರಗಳ 95 ಕೇಂದ್ರಗಳಿಂದ ಬಂದವರು ಎಂದು ವಿಚಾರಣೆ ವೇಳೆ ಕೇಂದ್ರ ಮಾಹಿತಿ ನೀಡಿದೆ.