ಅನರ್ಹ ಬಗರ್ ಹುಕುಂ ಅರ್ಜಿ ಪುನರ್ ಪರಿಶೀಲನೆ: ಸಚಿವ ಕೃಷ್ಣ ಭೈರೇಗೌಡ
ಬೆಂಗಳೂರು: ಸಾಗುವಳಿ ಭೂ ಮಂಜೂರಾತಿಗಾಗಿ ಬಗರ್ ಹುಕುಂ (ಅಕ್ರಮ ಸಕ್ರಮ) ಯೋಜನೆಯ ಅಡಿ ತಿರಸ್ಕೃತಗೊಂಡ ಅರ್ಜಿಗಳನ್ನು ಪುನರ್ ಪರಿಶೀಲಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಹರೀಶ್ ವಿ.ಪಿ. ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಗರ್ ಹುಕುಂ ಕಾನೂನನ್ನು ಜಾರಿಗೆ ತಂದಿರುವುದೇ ಬಡವರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ. ಅರ್ಹ ಫಲಾನುಭವಿಗಳಿಗೆ ಭೂ ಮಂಜೂರು ಮಾಡುವುದು ಸರಕಾರದ ಕರ್ತವ್ಯವೂ ಹೌದು. ಹೀಗಾಗಿ ತಿರಸ್ಕೃತ ಅಥವಾ ಅನರ್ಹಗೊಂಡ ಬಗರ್ ಹುಕುಂ ಅರ್ಜಿಗಳಲ್ಲಿ ತಪ್ಪಾಗಿದ್ದರೆ, ನಿಯಮ ಮೀರಿ ಅನರ್ಹಗೊಂಡಿದ್ದರೆ ಮತ್ತೊಮ್ಮೆ ಪುನರ್ ಪರಿಶೀಲನೆ ಮಾಡಲಾಗುವುದು ಎಂದರು.
ಇನ್ನೂ, ಗೋಮಾಳ ಜಮೀನಿನ ಮಂಜೂರಾತಿಗೆ ಸಂಬಂಧಿಸಿದ ಅರ್ಜಿಗಳನ್ನು ಮಾತ್ರ ಅನರ್ಹಗೊಳಿಸಿಲ್ಲ. ಬದಲಾಗಿ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ವ್ಯಾಪ್ತಿಯಲ್ಲಿ ಬರುವ ಭೂಮಿಗೂ ಅರ್ಜಿ ಸಲ್ಲಿಸಲಾಗಿದೆ. ಆದರೆ, ಕಾನೂನಿನ ಪ್ರಕಾರ ಸದರಿ ವ್ಯಾಪ್ತಿಯಲ್ಲಿರುವ ಭೂಮಿಯನ್ನು ಬಗರ್ ಹುಕುಂ ಅಡಿಯಲ್ಲಿ ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಅಲ್ಲದೆ, ಬಡವರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಜಾರಿಗೆ ತಂದಿರುವ ಬಗರ್ ಹುಕುಂ ಯೋಜನೆಯನ್ನು ಅನೇಕರು ಉದ್ದೇಶಪೂರ್ವಕವಾಗಿ ದುರುಪಯೋಗಗೊಳಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕೆಲವರು ಬಗರ್ ಹುಕುಂ ಜಮೀನು ಮಂಜೂರಾತಿಗೆ 25ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಕಾನೂನಿನ ಪ್ರಕಾರ ಅರ್ಜಿದಾರರಿಗೆ 2005ಕ್ಕೆ ಕನಿಷ್ಠ 18 ವರ್ಷವಾಗಿರಬೇಕು. ಆದರೆ, ಈಗ 18 ವರ್ಷವಾದವರೂ ಅರ್ಜಿ ಸಲ್ಲಿಸಿದ್ದಾರೆ. ನಮೂನೆ 57ರ ಅಡಿಯಲ್ಲಿ ಒಟ್ಟಾರೆ 9,85,000 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಎಲ್ಲರಿಗೂ ಜಮೀನು ಮಂಜೂರು ಮಾಡಬೇಕೆಂದರೆ 54 ಲಕ್ಷ ಎಕರೆ ಜಮೀನಿನ ಅಗತ್ಯವಿದೆ. ಆದರೆ, ರಾಜ್ಯದಲ್ಲಿ ಸರಕಾರಿ ಭೂಮಿಯೇ ಅಷ್ಟಿಲ್ಲ. ಅನರ್ಹರಿಗೆ ಭೂ ಮಂಜೂರುಗೊಳಿಸಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಹೀಗಾಗಿ ಅನೇಕರ ಅರ್ಜಿಗಳು ಅನರ್ಹಗೊಂಡಿವೆ. ಆದರೆ, ಅರ್ಜಿಗಳನ್ನು ತಿರಸ್ಕೃತಗೊಳಿಸುವ ಸಂದರ್ಭದಲ್ಲಿ ನಿಯಮಗಳನ್ನು ತಪ್ಪಾಗಿ ಅರ್ಥೈಸಿದ್ದರೆ ಖಂಡಿತವಾಗಿ ಪುನರ್ ಪರಿಶೀಲನೆಗೆ ಒಳಪಡಿಸಲಾಗುವುದು ಎಂದು ವಿವರಿಸಿದರು.
1 ಸಾವಿರ ಗ್ರಾಮ ಲೆಕ್ಕಾಧಿಕಾರಿಗಳ ನೇಮಕ: ಬಿಜೆಪಿ ಸದಸ್ಯ ಕಿರಣ್ ಕುಮಾರ್ ಕೂಡ್ಲಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಂದಾಯ ಇಲಾಖೆಯ ಕೆಲಸವನ್ನು ಮತ್ತಷ್ಟು ಚುರುಕುಗೊಳಿಸಲು ಹಾಗೂ ಜನರಿಗೆ ಸರಳ ಆಡಳಿತ ನೀಡುವ ಉದ್ದೇಶದಿಂದ ಶೀಘ್ರದಲ್ಲೇ 1000 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದರು.
ಕುಂದಾಪುರ ತಾಲೂಕಿನಲ್ಲಿ ಕಂದಾಯ ಇಲಾಖೆಯ 110 ಹುದ್ದೆಗಳ ಪೈಕಿ 70 ಹುದ್ದೆಗಳನ್ನು ಈಗಾಗಲೇ ಭರ್ತಿ ಮಾಡಲಾಗಿದೆ. ಅಂದರೆ, ಶೇ.65ರಷ್ಟು ಸ್ಥಾನಗಳನ್ನು ಭರ್ತಿ ಮಾಡಲಾಗಿದೆ. ಉಳಿದ ಸ್ಥಾನಗಳನ್ನೂ ಶೀಘ್ರದಲ್ಲೇ ಭರ್ತಿ ಆಗಲಿವೆ.ಇತರೆ ಇಲಾಖೆಗಳಿಗೆ ಹೋಲಿಸಿದರೆ ಕಂದಾಯ ಇಲಾಖೆಯಲ್ಲಿ ನೌಕರರ ಸಂಖ್ಯೆ ಅಧಿಕವಿದೆ. ಅಲ್ಲದೆ, ಸಾರ್ವಜನಿಕರಿಗೆ ಶೀಘ್ರ ಸೇವೆ ನೀಡುವ ಉದ್ದೇಶಿದಿಂದ ಶೀಘ್ರದಲ್ಲೇ 1000 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಅವರು ನುಡಿದರು.
ಇದಕ್ಕೂ ಮೊದಲು ಕಿರಣ್ ಕುಮಾರ್ ಕೂಡ್ಲಿ ಪ್ರಸ್ತಾಪಿಸಿ, ತಾಲೂಕುಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ಕಂದಾಯ ಇಲಾಖೆಯ ವಿವಿಧ ಹಂತದ ನೌಕರರನ್ನು ಬೇರೆಡೆ ನಿಯೋಜನೆಗೊಳಿಸಲಾಗುತ್ತಿದೆ. ಉದ್ಯೋಗಿಗಳ ಕೊರತೆಯಿಂದಾಗಿ ಕಂದಾಯ ಇಲಾಖೆಯಲ್ಲಿ ಜನರಿಗೆ ಸರಿಯಾದ ಸಮಯಕ್ಕೆ ಕೆಲಸವಾಗುತ್ತಿಲ್ಲ ಎಂದರು.
ಆಡಳಿತ ಕಟ್ಟಡಗಳ ನಿರ್ಮಾಣ: ತಾಲೂಕು ಆಡಳಿತ ಕಟ್ಟಡಗಳ ದುರಸ್ತಿ ಬಗ್ಗೆ ಕಾಂಗ್ರೆಸ್ ಸದಸ್ಯ ಶಿವಾನಂದ್ ಕೌಜಲಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ 49 ಹೊಸ ತಾಲೂಕುಗಳಿಗೂ ತಾಲೂಕು ಆಡಳಿತ ಕಟ್ಟಡಗಳ ನಿರ್ಮಾಣಕ್ಕೆ ಮುಂದಿನ ಎರಡು-ಮೂರು ವರ್ಷದಲ್ಲಿ ಅನುಮತಿ ನೀಡಲಾಗುವುದು. ಜತೆಗೆ, ಹೆಚ್ಚುವರಿಯಾಗಿ 80ರಿಂದ 100ತಾಲೂಕುಗಳ ಆಡಳಿತ ಕಚೇರಿಗಳ ದುರಸ್ತಿಯಾಗಬೇಕಿದ್ದು, ಹೊಸ ಆಡಳಿತ ಕಚೇರಿಗಳ ನಿರ್ಮಾಣಕ್ಕೆ ಬೇಡಿಕೆ ಇದೆ. ಅನುದಾನದ ಲಭ್ಯತೆಯನ್ನು ನೋಡಿಕೊಂಡು ಆದ್ಯತೆ ಮೇರೆಗೆ ಆಡಳಿತ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗುವುದು ಎಂದು ಕೃಷ್ಣ ಭೈರೇಗೌಡ ಮಾಹಿತಿ ನೀಡಿದರು.