ರಾಜ್ಯಾದ್ಯಂತ 33,863 ಅತಿಥಿ ಶಿಕ್ಷಕರ ನೇಮಕ | ಜೂ.15ರೊಳಗಾಗಿ ಇಲಾಖೆಗೆ ನೇಮಕಾತಿ ವಿವರ ನೀಡಲು ಸೂಚನೆ
ಸಾಂದರ್ಭಿಕ ಚಿತ್ರ
ಬೆಂಗಳೂರು : 2024-25ನೆ ಶೈಕ್ಷಣಿಕ ಸಾಲಿಗೆ ರಾಜ್ಯದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ 33,863 ಅತಿಥಿ ಶಿಕ್ಷಕರನ್ನು ನೇಮಕಾತಿಗೆ ಅವಕಾಶ ನೀಡಿದ್ದು, ಜೂ.15ರೊಳಗಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ವಿವರವನ್ನು ನೀಡಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶಿಸಿದ್ದಾರೆ.
ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಯಂ ಶಿಕ್ಷಕರ ನೇಮಕವಾಗುವವರೆಗೆ ಅಥವಾ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಶಿಕ್ಷಕರ ಕೊರತೆಯನ್ನು ನೀಗಿಸುವ ದೃಷ್ಠಿಯಿಂದ ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.
ಪ್ರಾಥಮಿಕ ಶಾಲೆಗಳಿಗೆ ಸಂಬಂಧಿಸಿದಂತೆ ಅತಿಥಿ ಶಿಕ್ಷಕರ ಆಯ್ಕೆ ಜವಾಬ್ದಾರಿ ಸಂಬಂಧಪಟ್ಟ ಸರಕಾರಿ ಶಾಲಾ ಮುಖ್ಯ ಶಿಕ್ಷಕರುಗಳ ಮೂಲಕವೇ ಮಾಡಬೇಕು. ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರನ್ನು ಪ್ರಮುಖವಾಗಿ ಆದ್ಯತೆ ಮೇರೆಗೆ ಗ್ರಾಮೀಣ ಪ್ರದೇಶಗಳಲ್ಲಿನ ಖಾಲಿ ಹುದ್ದೆಗಳಿಗೆ ಹಾಗೂ ಶಿಕ್ಷಕ ರಹಿತ ಶಾಲೆಗೆಳಿಗೆ, ಹೆಚ್ಚು ವಿದ್ಯಾರ್ಥಿಗಳಿರುವ ಖಾಲಿ ಹುದ್ದೆಗಳಿಗೆ ಮೊದಲ ಆದ್ಯತೆ ನೀಡಬೇಕು.
ರಾಜ್ಯದಲ್ಲಿ ಶಾಲಾ ಶಿಕ್ಷಣ ಇಲಾಖೆಯಡಿ ವಿಶೇಷವಾಗಿ ಪ್ರಾರಂಭಿಸಿರುವ ಸರಕಾರಿ ಕರ್ನಾಟಕ ಪಬ್ಲಿಕ್ ಶಾಲೆಗಳು, ಬೆಂಗಳೂರು ಪಬ್ಲಿಕ ಶಾಲೆಗಳು, ದ್ವಿಭಾಷಾ(ಆಂಗ್ಲಭಾಷೆ) ಮಾಧ್ಯಮದ ತರಗತಿಗಳಿರುವ ಶಾಲೆಗಳು ಹಾಗೂ ಆದರ್ಶ ವಿದ್ಯಾಲಯಗಳಲ್ಲಿ ಶೇ.100ರಷ್ಟು ಅತಿಥಿ ಶಿಕ್ಷಕರನ್ನು ಆದ್ಯತೆ ಮೇರೆಗೆ ನೇಮಕಾತಿ ಮಾಡಬೇಕು. ಅತಿಥಿ ಶಿಕ್ಷಕರನ್ನು ಆಯಾ ಹುದ್ದೆಗೆ ನಿಗದಿಪಡಿಸಿರುವ ಕನಿಷ್ಟ ವಿದ್ಯಾರ್ಹತೆಯನ್ನು ಪರಿಗಣಿಸಿ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಬೇಕು ಎಂದು ತಿಳಿಸಲಾಗಿದೆ.
ಅತಿಥಿ ಶಿಕ್ಷಕರ ಹಾಜರಾತಿ ವಹಿಯನ್ನು ಪ್ರತ್ಯೇಕವಾಗಿ ನಿರ್ವಹಣೆ ಮಾಡಬೇಕು. ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರ ಗೌರವ ಸಂಭಾವನೆ ಪ್ರತಿ ತಿಂಗಳಿಗೆ 10 ಸಾವಿರ ರೂ. ಆಗಿರುತ್ತದೆ. ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡ ಹುದ್ದೆಗಳಿಗೆ ವರ್ಗಾವಣೆ, ನೇಮಕಾತಿ ಮುಖಾಂತರ ಖಾಯಂ ಶಿಕ್ಷಕರು ಸ್ಥಳನಿಯುಕ್ತಿಗೊಂಡಲ್ಲಿ, ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅತಿಥಿ ಶಿಕ್ಷಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ, ತಾಲ್ಲೂಕಿನಲ್ಲಿ ಇತರೆ ಕಾರಣಗಳಿಂದ ತೆರವಾದ ಖಾಲಿ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು, ಸ್ಥಳೀಯವಾಗಿ ಹಂಚಿಕೆ ಮಾಡಿ ಕ್ರಮವಹಿಸುವುದು.
ಪ್ರಸ್ತುತ ವರ್ಗಾವಣೆ ತಂತ್ರಾಂಶದಲ್ಲಿ ಇದ್ದಂತೆ ಖಾಲಿಹುದ್ದೆಗಳ ಅನುಸಾರ ತಾಲ್ಲೂಕುವಾರು ಅತಿಥಿ ಶಿಕ್ಷಕರ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದ್ದು, ಅತಿಥಿ ಶಿಕ್ಷಕರ ಹುದ್ದೆಗಳನ್ನು ತಾಲ್ಲೂಕು ಪಂಚಾಯಿತಿವಾರು ಮರುಹಂಚಿಕೆ ಮಾಡಿ ಅನುದಾನದ ವಿವರ ಆಯುಕ್ತರ ಕಛೇರಿಗೆ ಸಲ್ಲಿಸಿದ ನಂತರ ತಾಲ್ಲೂಕಿನಿಂದ ತಾಲ್ಲೂಕಿಗೆ(ಜಿಲ್ಲೆಯ ಒಳಗೆ) ಅತಿಥಿ ಶಿಕ್ಷಕರ ಮರುಹಂಚಿಕೆ ಮಾಡುವಂತಿಲ್ಲ ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶಿದ್ದಾರೆ.