ಸರಕಾರಿ ನೌಕರರು ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿಯ ಟ್ಯಾಗ್ ಧರಿಸುವುದು ಕಡ್ಡಾಯ
ಬೆಂಗಳೂರು : ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಳಿಸಿ 50 ವರ್ಷಗಳು ಪೂರೈಸಿರುವ ಹಿನ್ನಲೆಯಲ್ಲಿ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಅಭಿಯಾನದಡಿ ಎಲ್ಲ ರಾಜ್ಯ ಸರಕಾರಿ ನೌಕರರು ಕೆಂಪು-ಹಳದಿ ಬಣ್ಣಗಳನ್ನು ಒಳಗೊಂಡಿರುವ ಕೊರಳುದಾರ(ಟ್ಯಾಗ್) ಹೊಂದಿದ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಬೇಕೆಂದು ರಾಜ್ಯ ಸರಕಾರವು ನಿರ್ಣಯಿಸಿದೆ.
ಈ ನಿಟ್ಟಿನಲ್ಲಿ ರಾಜ್ಯ ಸರಕಾರದ ಎಲ್ಲ ಇಲಾಖೆಗಳು, ನಿಗಮ, ಮಂಡಳಿ, ನಿರ್ದೇಶನಾಲಯ, ಆಯುಕ್ತಾಲಯ ಇತ್ಯಾದಿ ಸರಕಾರಿ ಮತ್ತು ಸರಕಾರಿ ಸ್ವಾಮ್ಯದ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಅಧಿಕಾರಿ, ಸಿಬ್ಬಂದಿಗಳು ತಮ್ಮ ಇಲಾಖೆ, ಸಂಸ್ಥೆಯ ಗುರುತಿನ ಚೀಟಿಯನ್ನು ಧರಿಸಲು ಅನುವಾಗುವಂತೆ ಹಳದಿ ಮತ್ತು ಕೆಂಪು ಬಣ್ಣದ ಕೊರಳುದಾರವನ್ನು ಒದಗಿಸಲು ಕೂಡಲೇ ನಿಯಮಗಳನುಸಾರ ಕ್ರಮವಹಿಸುವಂತೆ ತಿಳಿಸಲಾಗಿದೆ.
ನೂತನ ಕೊರಳುದಾರದ ವಿನ್ಯಾಸವನ್ನು https://photos.app.goo.gl/YcjeNHnDNPecW8Q48 ಆನ್ಲೈನ್ ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ರಾಜಕೀಯ)ಯ ಅಧೀನ ಕಾರ್ಯದರ್ಶಿ ಸಂದೀಪ್ ಬಿ.ಕೆ. ಸುತ್ತೋಲೆಯಲ್ಲಿ ತಿಳಿಸಿದ್ದಾರೆ.