ರಾಜ್ಯ ಶಿಕ್ಷಣ ನೀತಿ ಆಯೋಗದ ಶಿಫಾರಸು ; ಪದವಿಯನ್ನು ಮೂರು ವರ್ಷಕ್ಕೆ ಇಳಿಸಿ ಸರಕಾರ ಆದೇಶ
ಬೆಂಗಳೂರು : ಶಿಕ್ಷಣ ತಜ್ಞ ಪ್ರೊ. ಸುಖದೇವ್ ಥೋರಟ್ ಅಧ್ಯಕ್ಷತೆಯಲ್ಲಿ ರಚಿಸಿದ್ದ ರಾಜ್ಯ ಶಿಕ್ಷಣ ನೀತಿ ಆಯೋಗವು ವರದಿಯನ್ನು ಸಲ್ಲಿಸಿದ್ದು, ಆಯೋಗದ ಶಿಫಾರಸುಗಳಂತೆ ಪದವಿಯನ್ನು ಮೂರು ವರ್ಷಕ್ಕೆ ಇಳಿಸಿ ರಾಜ್ಯ ಸರಕಾರವು ಬುಧವಾರದಂದು ಆದೇಶ ಹೊರಡಿಸಿದೆ.
ಸ್ನಾತಕ ಪದವಿ ಕಾರ್ಯಕ್ರಮದ ಕಾಲಾವಧಿ ಕೇವಲ ಮೂರು ವರ್ಷಗಳು ಮಾತ್ರ ಆಗಿದ್ದು, ನಾಲ್ಕು ವರ್ಷದ ಪದವಿ ಕಾರ್ಯಕ್ರಮವನ್ನು ಪ್ರಾರಂಭಿಸುವ ಆಯ್ಕೆ ಇರುವುದಿಲ್ಲ. ಈ ಮೊದಲು ನಾಲ್ಕು ವರ್ಷದ ಪದವಿಯು ಆಯ್ಕೆಯಾಗಿತ್ತು ಎಂದು ಆದೇಶದಲ್ಲಿ ತಿಳಿಸಿದೆ.
ಮೂರು ಬೇರೆ ಬೇರೆ ಪದವಿ ಪಠ್ಯಕ್ರಮದ ಚೌಕಟ್ಟುಗಳನ್ನು ಪ್ರಸ್ತಾಪಿಸಿ ಅಂಗೀಕರಿಸಲಾಗಿದೆ. ಎಲ್ಲ 6 ಸೆಮಿಸ್ಟರ್ ಗಳಲ್ಲಿ 3 ಮೇಜರ್ ಗಳೊಡನೆ ಸಾಮಾನ್ಯ ಪದವಿ ಇರಲಿದೆ. 4ನೆ ಸೆಮಿಸ್ಟರ್ ವರೆಗೆ 3 ಮೇಜರ್ ಗಳು ಮತ್ತು 5 ಹಾಗೂ 6ನೆ ಸೆಮಿಸ್ಟರ್ ಗಳಲ್ಲಿ 1 ವಿಷಯದಲ್ಲಿ ವಿಶೇಷಜ್ಞತೆ(ಸ್ಪೆಷಲೈಜೇಷನ್) ಇರಲಿದೆ. ಮೊದಲನೇ ಸೆಮಿಸ್ಟರ್ ನಿಂದ ಮೈನರ್ ಸಬ್ಜೆಕ್ಟ್ ಗಳ ಜೊತೆಗೆ 1 ವಿಷಯದಲ್ಲಿ ವಿಶೇಷಜ್ಞತೆ ಇರಲಿದೆ ಎಂದು ಆದೇಶದಲ್ಲಿ ತಿಳಿಸಿದೆ.
ಮೊದಲನೇ ವರ್ಷದ ನಂತರ ಸರ್ಟಿಫಿಕೇಟ್ ನೀಡುವ ಹಾಗೂ ಎರಡನೆ ವರ್ಷದ ನಂತರ ಡಿಪ್ಲೊಮಾ ನೀಡುವ(ಬಹು ಆಗಮನ/ನಿರ್ಗಮನ) ಕುರಿತು, ಅಂತಿಮ ವರದಿ ಸಲ್ಲಿಕೆಯಾದ ನಂತರ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ. ಆದರೆ ಈ ಹಂತದಲ್ಲಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಪಠ್ಯಕ್ರಮ ರಚನೆಯಲ್ಲಿನ ಬದಲಾವಣೆಯ ಮೂಲಕ ಆಳವಾದ ಜ್ಞಾನ, ಔದ್ಯಮಿಕ ಆಧಾರಿತ ಕೊರ್ಸ್‍ಗಳನ್ನು ಮತ್ತು ಪ್ರಾದೇಶಿಕ ನಿರ್ದಿಷ್ಟ ವಿಷಯಗಳನ್ನು ವಿಶ್ವವಿದ್ಯಾಲಯಗಳ ಅಧ್ಯಯನ ಮಂಡಳಿಗೆ ಸ್ವಾಯತ್ತತೆಯನ್ನು ನೀಡುವುದನ್ನು ಕೇಂದ್ರೀಕರಿಸಲಾಗಿದೆ. ಅಪ್ರೆಂಟೀಸ್‍ಶಿಪ್-ಎಂಬೆಡೆಡ್ ಡಿಗ್ರಿ ಕೋರ್ಸ್‍ಗಳನ್ನು ಪಠ್ಯಕ್ರಮದ ಭಾಗವಾಗಿ ಪರಿಗಣಿಸಲಾಗಿದೆ.
ಈ ಬದಲಾವಣೆಗಳು 2021-22, 2022-23, 2023-24ನೆ ವರ್ಷಗಳಲ್ಲಿ ಪ್ರವೇಶಾತಿ ಪಡೆದ ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, 2021ರ ಆ.7ರ ಆದೇಶದಂತೆ ಅವರು ವಿದ್ಯಾಭ್ಯಾಸ ಮಾಡುತ್ತಾರೆ. ಘೋಷಣೆ ಮಾಡಲ್ಪಟ್ಟಿರುವ ಬದಲಾವಣೆಗಳು ಶೈಕ್ಷಣಿಕ ವರ್ಷ 2024-25ರಿಂದ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ಸಂಯೋಜನೆ ಮತ್ತು ಪ್ರವೇಶಾತಿ ಪ್ರಕ್ರಿಯೆಗಳು: ವಿಶ್ವವಿದ್ಯಾಲಯಗಳಿಗೆ ಸಂಯೋಜನಾ ಪ್ರಕ್ರಿಯೆ ಮತ್ತು ಪ್ರವೇಶಾತಿಗಳು ಈ ಕೂಡಲೇ ಪ್ರಾರಂಭಗೊಳ್ಳುತ್ತವೆ. ಸರಕಾರದ ಆದೇಶದಂತೆ ಪ್ರವೇಶಾತಿ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಈ ಕುರಿತು ಈಗಾಗಲೇ ಎಲ್ಲ ವಿಶ್ವವಿದ್ಯಾಲಯಗಳಿಗೆ ಮಾಹಿತಿ ನೀಡಲಾಗಿದ್ದು, ಕಾಲೇಜುಗಳಿಗೆ ಸ್ಪಷ್ಟೀಕರಣ ಬೇಕಾದಲ್ಲಿ ತಮ್ಮ ಸಂಯೋಜಕ ವಿಶ್ವವಿದ್ಯಾಲಯಗಳನ್ನು ಕೇಳಬಹುದಾಗಿದೆ ಎಂದು ತಿಳಿಸಿದೆ.
2024-25ನೇ ಶೈಕ್ಷಣಿಕ ಸಾಲಿನ ಸಂಯೋಜನಾ ಪ್ರಕ್ರಿಯೆಯು ಸಂಬಂಧಪಟ್ಟ ವಿಶ್ವವಿದ್ಯಾಲಯಗಳ ಸಂಯೋಜಿತ ಕಾಲೇಜುಗಳಿಗೆ ಇಂದು(ಮೇ 9) ಯುಯುಸಿಎಂಎಸ್ ತಂತ್ರಾಂಶದ ಮೂಲಕ ಪ್ರಾರಂಭವಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.
2024-25ನೇ ಶೈಕ್ಷಣಿಕ ಸಾಲಿನಿಂದ ಪದವಿ ಕಾರ್ಯಕ್ರಮಗಳಿಗೆ ಸಂಬಂಧಪಟ್ಟಂತೆ ರಾಜ್ಯ ಶಿಕ್ಷಣ ನೀತಿ ಆಯೋಗವು ನೀಡಿರುವ ಮಧ್ಯಂತರ ವರದಿಗಳ ಶಿಫಾರಸುಗಳಂತೆ ಪದವಿ ಅವಧಿ ಹಾಗೂ ಪಠ್ಯಕ್ರಮ ರಚನೆಗೆ ಸಂಬಂಧಪಟ್ಟಂತೆ ಸರಕಾರವು ಇದೀಗ ಆದೇಶ ಹೊರಡಿಸಿದೆ. ಆಯೋಗವು 2024ರ ಆಗಸ್ಟ್ ನಲ್ಲಿ ಅಂತಿಮ ವರದಿಯನ್ನು ಸಲ್ಲಿಸಲಿದೆ.