ದಾವಣಗೆರೆ ಲಿಂಗಾಯತ ಸಮಾವೇಶನಕ್ಕೂ ಬಿಜೆಪಿಗೂ ಸಂಬಂಧವಿಲ್ಲ : ರೇಣುಕಾಚಾರ್ಯ

ಎಂ.ಪಿ.ರೇಣುಕಾಚಾರ್ಯ
ಬೆಂಗಳೂರು : ‘ದಾವಣಗೆರೆಯಲ್ಲಿ ನಡೆಯಲಿರುವ ‘ವೀರಶೈವ-ಲಿಂಗಾಯತ ಮಹಾ ಸಮಾವೇಶ’ಕ್ಕೂ ಬಿಜೆಪಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಸಮುದಾಯದ ಒಳಪಂಗಡಗಳ ಒಗ್ಗಟ್ಟಿಗಾಗಿ ಸಮಾವೇಶ ನಡೆಸಲಾಗುತ್ತಿದೆ’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಲ ದುಷ್ಟಶಕ್ತಿಗಳು ತಮ್ಮ ವೈಯಕ್ತಿಕ ಹಿತಕ್ಕಾಗಿ ಸಮುದಾಯವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಒಗ್ಗಟ್ಟು ಮೂಡಿಸುವುದರ ಜೊತೆಗೆ ಒಳಪಂಗಡಗಳಲ್ಲಿ ಸಾಮರಸ್ಯ ಮೂಡಿಸಲು ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರಾಜ್ಯದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಅವೈಜ್ಞಾನಿಕ ‘ಜಾತಿ ಗಣತಿ’ ವರದಿಯನ್ನು ಯಾವುದೇ ಕಾರಣಕ್ಕೂ ಅನುಷ್ಟಾನಗೊಳಿಸಬಾರದು. ಅಲ್ಲದೆ, ವೀರಶೈವ ಲಿಂಗಾಯತ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ 2 ‘ಎ’ ಅಡಿಯಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಲಾಗುವುದು ಎಂದರು.
ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು, ಯಾವುದೇ ಕಾರಣಕ್ಕೂ ಈ ಸಮಾವೇಶ ನಡೆಸಬಾರದು ಎಂದು ಮನವಿ ಮಾಡಿದ್ದಾರೆ. ಆದರೆ, ಪಕ್ಷಕ್ಕೂ ಈ ಸಮಾವೇಶಕಕ್ಕೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಸಮಾವೇಶ ನಡೆಯುವುದು ನಿಶ್ಚಿತ ಎಂದು ಅವರು ವಿವರಣೆ ನೀಡಿದರು.
ಎಲ್ಲರಿಗೂ ಸ್ವಾಗತ: ಯಡಿಯೂರಪ್ಪ, ಯತ್ನಾಳ್ ಸೇರಿದಂತೆ ಎಲ್ಲರಿಗೂ ಸಮಾವೇಶಕ್ಕೆ ಸ್ವಾಗತ. ಇದೊಂದು ಸಮುದಾಯದ ಸಮಾವೇಶ ಎಂದ ಅವರು, ನಾನು ಯಾರಿಗೂ ಬಗ್ಗುವ ಅಥವಾ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವ ವ್ಯಕ್ತಿಯೇ ಅಲ್ಲ. ಯತ್ನಾಳ್ ತಮ್ಮ ಸಮಾಜದ ನಾಯಕರು, ಅವರು ಸಂಘರ್ಷದ ಹಾದಿ ಬಿಟ್ಟು, ಸಮುದಾಯಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಸಾಗೋಣ ಎಂದು ಕೋರುತ್ತೇನೆ ಎಂದರು.