ರೇಣುಕಾಸ್ವಾಮಿ ಕೊಲೆ ಪ್ರಕರಣ | ಅಂತಿಮ ಘಟ್ಟ ತಲುಪಿದ ತನಿಖೆ, ಶೀಘ್ರವೇ ಚಾರ್ಜ್ಶೀಟ್ ಸಲ್ಲಿಕೆ : ಬಿ.ದಯಾನಂದ್
ಪೊಲೀಸ್ ಆಯುಕ್ತ ಬಿ.ದಯಾನಂದ್/ ರೇಣುಕಾಸ್ವಾಮಿ
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಅಂತಿಮ ಘಟ್ಟವನ್ನು ತಲುಪಿದ್ದು, ಮೂರು ಮಾದರಿಯ ಸಾಕ್ಷ್ಯಗಳನ್ನು ಸಂಗ್ರಹ ಮಾಡಲಾಗಿದೆ. ಶೀಘ್ರದಲ್ಲಿಯೇ ಪ್ರಕರಣದ ಚಾರ್ಜ್ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರೋಪಿ ದರ್ಶನ್ ಮತ್ತು ಸಹಚರರಿಗೆ ಸಂಬಂಧಿಸಿದ ಈ ಪ್ರಕರಣದಲ್ಲಿ ಮೌಖಿಕ, ಸಾಂದರ್ಭಿಕ ಮತ್ತು ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ಅವುಗಳನ್ನು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಅಲ್ಲಿಂದ ತನಿಖೆಯ ಸುಮಾರು ಶೇ.70ರಷ್ಟು ವರದಿಗಳು ತಮ್ಮ ಕೈ ಸೇರಿವೆ ಎಂದರು.
ಎಲೆಕ್ಟ್ರಾನಿಕ್ ಉಪಕರಣಗಳ ಸಾಕ್ಷ್ಯಗಳನ್ನು ಹೈದರಾಬಾದ್ ಎಫ್ಎಸ್ಎಲ್ಗೆ ಕಳಿಸಲಾಗಿದ್ದು, ಅಲ್ಲಿಂದ ವರದಿಗಳು ಕೆಲವೇ ದಿನಗಳಲ್ಲಿ ನಮಗೆ ತಲುಪಲಿವೆ. ಎಲ್ಲ ವರದಿಗಳು ಪ್ರಾಪ್ತವಾದ ಬಳಿಕ ಮತ್ತೊಮ್ಮೆ ಸಾಕ್ಷಿಗಳಿಂದ ಸ್ಪಷ್ಟೀಕರಣ ಪಡೆಯಲಾಗುವುದು ಎಂದು ಅವರು ಹೇಳಿದರು.
ವರದಿಗಳು ಬಂದ ನಂತರ ಅವುಗಳನ್ನು ಸಾಕ್ಷ್ಯಗಳೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಆ ಬಳಿಕ ಪ್ರಕರಣದ ಚಾರ್ಜ್ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಅನೇಕ ಆಯಾಮಗಳಲ್ಲಿ ತನಿಖೆ ನಡೆಸಿದ್ದೇವೆ. ಈ ಕುರಿತಂತೆ ನಮ್ಮ ಕಡೆಯಿಂದ ವಿಳಂಬವಾಗುವುದಿಲ್ಲ ಎಂದು ಬಿ.ದಯಾನಂದ್ ತಿಳಿಸಿದರು.