ರೇಣುಕಾಸ್ವಾಮಿ ಕೊಲೆ ಪ್ರಕರಣ | ತನಿಖೆ ಬಹುತೇಕ ಮುಕ್ತಾಯ, ಚಾರ್ಜ್‍ಶೀಟ್ ಸಲ್ಲಿಕೆಗೆ ಸಿದ್ಧತೆ : ಬಿ.ದಯಾನಂದ್
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಕುರಿತ ತನಿಖೆ ಬಹುತೇಕ ಮುಕ್ತಾಯಗೊಂಡಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ(ಚಾರ್ಜ್‍ಶೀಟ್) ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಈ ಬಗ್ಗೆ ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದ ವೈದ್ಯಕೀಯ ವರದಿ ಹಾಗೂ ಅದಕ್ಕೆ ಸಂಬಂಧಿಸಿದ ಕೆಲವು ಪೂರಕ ದಾಖಲೆಗಳನ್ನು ತನಿಖಾಧಿಕಾರಿಗಳು ಸಂಗ್ರಹಿಸಲಾಗಿದೆ. ಅಲ್ಲದೆ, ಬಹಳಷ್ಟು ಮಂದಿ ಸಾಕ್ಷಿಗಳಿಂದ ಹೇಳಿಕೆಗಳನ್ನು ಪಡೆದುಕೊಳ್ಳಲಾಗಿದೆ ಎಂದರು.
ಮತ್ತೊಂದೆಡೆ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ, ವಿನಯ್ ಸೇರಿದಂತೆ ಕೆಲ ಆರೋಪಿಗಳ ಐಫೋನ್ ಡಾಟಾ ರಿಟ್ರೀವ್ ಮಾಡಲು ಹೈದರಾಬಾದ್‍ನ ಕೇಂದ್ರ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಈಗ ವರದಿ ಸಿದ್ಧವಾಗಿದ್ದು, ಅದನ್ನು ಪಡೆಯಲು ಪ್ರಕರಣದ ತನಿಖಾಧಿಕಾರಿಗಳ ತಂಡ ಖುದ್ದಾಗಿ ಹೈದರಾಬಾದ್‍ಗೆ ತೆರಳಿದೆ ಎಂದು ಅವರು ಹೇಳಿದರು.
ಈಗಾಗಲೇ ಪ್ರಕರಣದ ಭಾಗಶಃ ಸಾಂದರ್ಭಿಕ ಹಾಗೂ ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಬೆಂಗಳೂರು ನಗರ ಎಫ್‍ಎಸ್‍ಎಲ್(ವಿಧಿ ವಿಜ್ಞಾನ ಪ್ರಯೋಗಾಲಯ)ಗೆ ಕಳುಹಿಸಲಾಗಿದ್ದ ಭಾಗಶಃ ವರದಿಗಳು ನಮ್ಮ ಕೈ ಸೇರಿವೆ. ಪೂರಕವಾಗಿ ಇನ್ನೂ ಕೆಲವು ಮಾಹಿತಿಗಳನ್ನು ಕೇಳಬೇಕಿದೆ. ಅದನ್ನು ನಮ್ಮ ಪೊಲೀಸ್ ಸಿಬ್ಬಂದಿ ಮಾಡುತ್ತಿದೆ ಎಂದು ಬಿ.ದಯಾನಂದ್ ತಿಳಿಸಿದರು.
ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ವಿದ್ಯುನ್ಮಾನಗಳ ಸಲಕರಣೆಗಳನ್ನು ಹೈದರಾಬಾದ್‍ಗೆ ಕಳಿಸಲಾಗಿತ್ತು. ಅವುಗಳ ಪರಿಶೀಲನೆ ಕೂಡ ಪೂರ್ಣಗೊಂಡಿದೆ. ಈ ವರದಿ ಕೂಡ ಶೀಘ್ರದಲ್ಲೇ ಕೈ ಸೇರಲಿದೆ. ಇದೆಲ್ಲದರ ಆಧಾರ ಮೇರೆಗೆ ಎರಡೂ ವರದಿಗಳು ಬಂದ ನಂತರ ಆದಷ್ಟೂ ಬೇಗ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ ಎಂದು ಬಿ.ದಯಾನಂದ್ ಹೇಳಿದರು.