ಜೈಲಿನಲ್ಲಿ ರಾಜಾತಿಥ್ಯ ಪ್ರಕರಣ | ಬಳ್ಳಾರಿ ಜೈಲು ಸೇರಿದ ನಟ ದರ್ಶನ್
ಬೆಂಗಳೂರು/ಬಳ್ಳಾರಿ : ‘ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ’ ಎನ್ನಲಾದ ಆರೋಪ ಬಯಲಾದ ಹಿನ್ನೆಲೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್‍ರನ್ನು ಭಾರೀ ಪೊಲೀಸರ ಭದ್ರತೆಯಲ್ಲಿ ಗುರುವಾರ ಬೆಳಗ್ಗೆ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ ಅವರನ್ನು ಗುರುವಾರ ಬೆಳಗ್ಗೆ ಚಿಕ್ಕಬಳ್ಳಾಪುರ ಹಾಗೂ ಆಂಧ್ರದ ಅನಂತಪುರ ಜಿಲ್ಲೆಯ ಗಡಿಗ್ರಾಮ ಜೋಳದ ರಾಶಿ ಮೂಲಕ ಪೊಲೀಸರ ಬಿಗಿ ಭದ್ರತೆಯೊಂದಿಗೆ ಟಿಟಿ ವಾಹನದಲ್ಲಿ ಬಳ್ಳಾರಿ ಜೈಲಿಗೆ ಕರೆತರಲಾಯಿತು.
ಬೆಂಗಳೂರಿನ ಇಬ್ಬರು ಎಸಿಪಿಗಳಾದ ರಂಗಪ್ಪ ಹಾಗೂ ಸದಾನಂದ ತಿಪ್ಪಣವರ್ ನೇತೃತ್ವದ ತಂಡಗಳು ಸಿನಿಮೀಯ ರೀತಿಯಲ್ಲಿ ದರ್ಶನ್ ಇರುವ ಪೊಲೀಸ್ ವಾಹನದ ಮುಂದೆ ಎರಡು ಜೀಪ್ ಹಾಗೂ ಹಿಂದೆ ಎರಡು ಜೀಪ್‍ಗಳಲ್ಲಿ ಪ್ರಯಾಣಿಸಿ ರಕ್ಷಣೆ ಒದಗಿಸಿದರು.
ಬಳ್ಳಾರಿ ಜೈಲಿಗೆ ಆಗಮಿಸುತ್ತಿದ್ದಂತೆ ಪೊಲೀಸ್ ವಾಹನದಿಂದ ಇಳಿದ ದರ್ಶನ್ ಜೈಲು ಪ್ರವೇಶದ್ವಾರದ ಎಂಟ್ರಿ ಪುಸ್ತಕದಲ್ಲಿ ಸಹಿ ಮಾಡಿದರು. ಆಂತರಿಕ ಭದ್ರತಾ ವಿಭಾಗದಲ್ಲಿ ತಪಾಸಣೆ, ನಂತರ ಜೈಲು ವೈದ್ಯಾಧಿಕಾರಿಗಳು ಅವರ ಆರೋಗ್ಯ ತಪಾಸಣೆ ನಡೆಸಿದ್ದು, ಬಳಿಕ ಹೈ-ಸೆಕ್ಯೂರಿಟಿ ಸೆಲ್‍ಗೆ ಕಳುಹಿಸಲಾಯಿತು.
ಜೈಲಿನಲ್ಲಿ ಹೆಚ್ಚಿನ ಭದ್ರತೆ: ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಎಸ್ಪಿ ಶೋಭಾರಾಣಿ, ಜೈಲು ಅಧೀಕ್ಷಕಿ ಲತಾ ನೇತೃತ್ವದಲ್ಲಿ ಪೊಲೀಸರು ಜೈಲಿನೊಳಗಿನ ಎಲ್ಲ ಪರಿಸ್ಥಿತಿಯನ್ನು ಗುರುವಾರ ವೀಕ್ಷಿಸಿದ್ದು, ಜೈಲಿನಲ್ಲಿ ಭದ್ರತೆಗಾಗಿ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಅಲ್ಲದೆ, ಸಿಬ್ಬಂದಿಗಳ ಮೊಬೈಲ್ ಬಳಕೆ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.