ರೇಣುಕಾಸ್ವಾಮಿ ಹತ್ಯೆ ಪ್ರಕರಣ | ದರ್ಶನ್ಗೆ ಮಧ್ಯಂತರ ಜಾಮೀನು, ಸುಪ್ರೀಂಗೆ ಮೇಲ್ಮನವಿ : ಬಿ.ದಯಾನಂದ್
ಪೊಲೀಸ್ ಆಯುಕ್ತ ಬಿ.ದಯಾನಂದ್/ದರ್ಶನ್
ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ, ನಟ ದರ್ಶನ್ ತೂಗುದೀಪಗೆ ದೊರೆತಿರುವ ಮಧ್ಯಂತರ ಜಾಮೀನು ತೆರವಿಗೆ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗುವುದೆಂದು ಬೆಂಗಳೂರು ನಗರಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದ್ದಾರೆ.
ಶುಕ್ರವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದಲ್ಲಿ ಪ್ರಮುಖ ಆರೋಪಿಗೆ ದೊರೆತಿರುವ ಮಧ್ಯಂತರ ಜಾಮೀನು ತೆರವಿಗೆ ಮೇಲ್ಮನವಿ ಸಲ್ಲಿಸಲು ಸರ್ಕಾರದ ಅನುಮತಿ ಕೇಳಲಾಗಿತ್ತು. ಸರ್ಕಾರದಿಂದ ಅನುಮತಿ ದೊರೆತಿದ್ದು, ಸದ್ಯದಲ್ಲೇ ಕೋರ್ಟ್ಗೆ ಮನವಿ ಸಲ್ಲಿಸಲಾಗುವುದು ಎಂದರು.
ಸಾರ್ವಜನಿಕರು ಜಾಗೃತರಾಗಬೇಕು :
ಒಂದು ವೇಳೆ ನಿಮ ಬ್ಯಾಂಕ್ ಖಾತೆಯ ವಿವರಗಳನ್ನು ಬೇರೆಯವರಿಗೆ ಕೊಟ್ಟರೆ ವಂಚಕರು ಅದನ್ನು ದುರುಪಯೋಗಪಡಿಸಿಕೊಳ್ಳುವುದರಿಂದ ನೀವು ಸಂಕಷ್ಟಕ್ಕೆ ಒಳಗಾಗುತ್ತೀರಿ. ಈ ಬಗ್ಗೆ ಎಚ್ಚರದಿಂದಿರಿ ಎಂದು ಇದೇ ಸಂದರ್ಭದಲ್ಲಿ ಸಲಹೆ ನೀಡಿದರು.
ವಂಚಕರು ನಿಮಗೆ ಕಮಿಷನ್ ಹಾಗೂ ಇನ್ನಿತರೆ ಆಮಿಷವೊಡ್ಡಿ ಬ್ಯಾಂಕ್ ಖಾತೆಗಳ ನಂಬರ್ ಅನ್ನು ಪಡೆದು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಹಲವಾರು ದೂರುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಜಾಗೃತರಾಗಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.