ರೇಣುಕಾಸ್ವಾಮಿ ಹತ್ಯೆ ಪ್ರಕರಣ: 17 ಮಂದಿಯ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ
ಪವಿತ್ರಾ ಗೌಡ 1ನೇ, ನಟ ದರ್ಶನ್ 2ನೇ ಆರೋಪಿ
ದರ್ಶನ್ | ರೇಣುಕಸ್ವಾಮಿ
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು, ಆರೋಪಿ ನಟ ದರ್ಶನ್, ಆತನ ಸ್ನೇಹಿತೆ ಪವಿತ್ರಾಗೌಡ ಸೇರಿದಂತೆ 17 ಮಂದಿ ವಿರುದ್ಧ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಬುಧವಾರ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಪ್ರಕರಣದಲ್ಲಿ ನಟ ದರ್ಶನ್ ಸೇರಿ 17 ಆರೋಪಿಗಳನ್ನು ಬಂಧಿಸಿ ತನಿಖೆ ಆರಂಭಿಸಿದ್ದ ಪೊಲೀಸರು, ಇದುವರೆಗಿನ ತನಿಖೆಯಲ್ಲಿ ಸಂಗ್ರಹಿಸಿರುವ ಪ್ರತ್ಯಕ್ಷ, ಸಾಂದರ್ಭಿಕ, ತಾಂತ್ರಿಕ, ವೈಜ್ಞಾನಿಕ ಸೇರಿದಂತೆ 231 ಸಾಕ್ಷ್ಯಗಳನ್ನೊಳಗೊಂಡಂತೆ ಒಟ್ಟು 3,991 ಪುಟಗಳುಳ್ಳ 07 ಸಂಪುಟಗಳ 10 ಕಡತಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವುದಾಗಿ ಮಾಹಿತಿ ನೀಡಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಬೆಂಗಳೂರು ಪಶ್ಚಿಮ ವಲಯದ ಅಪರ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್.ಎಸ್ ನೇತೃತ್ವದಲ್ಲಿ ವಿಜಯನಗರ ಉಪವಿಭಾಗದ ಎಸಿಪಿ ಚಂದನ್ ಕುಮಾರ್.ಎನ್ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಒಳಗೊಂಡ ತಂಡ ಚಾರ್ಜ್ಶೀಟ್ ಅನ್ನು ಸಿದ್ಧಪಡಿಸಿದೆ ಎಂದು ತಿಳಿಸಿದರು.
ಮೂವರು ಪ್ರತ್ಯಕ್ಷ ಸಾಕ್ಷಿದಾರರು, ಎಫ್ಎಸ್ಎಲ್ ಹಾಗೂ ಸಿಎಫ್ಎಸ್ಎಲ್ ವರದಿಯ 8 ಸಾಕ್ಷಿಗಳು, ಸಿಆರ್ಪಿಸಿ 161 ಹಾಗೂ 164ರಡಿಯಲ್ಲಿ ದಾಖಲಿಸಲಾಗಿರುವ 27 ಜನರ ಹೇಳಿಕೆಗಳು, ಪಂಚರು 29, 8 ಜನ ಸರಕಾರಿ ಅಧಿಕಾರಿಗಳು (ತಹಶೀಲ್ದಾರರು, ವೈದ್ಯರು ಹಾಗೂ ಆರ್.ಟಿ.ಓ ಅಭಿಯಂತರರು), 56 ಜನ ಪೊಲೀಸರು ಸೇರಿದಂತೆ ಒಟ್ಟು 231 ಸಾಕ್ಷ್ಯಗಳನ್ನು ಒಳಗೊಂಡ ಚಾರ್ಜ್ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಬಿ.ದಯಾನಂದ್ ವಿವರಿಸಿದರು.
ಪ್ರಕರಣ ಹಿನ್ನೆಲೆ: ಜೂ.9ರಂದು ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಸತ್ವ ಅನುಗ್ರಹ ಅಪಾಟ್ಮೆರ್ಂಟ್ ಸಮೀಪದ ಮೋರಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಅಂದು ಕರ್ತವ್ಯಕ್ಕೆ ಬಂದ ಅಪಾರ್ಟ್ಮೆಂಟ್ನ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಪ್ರಕರಣದ ತನಿಖೆಗಿಳಿದ ಪೊಲೀಸರು ಸಿಸಿಟಿವಿ ದೃಶ್ಯಗಳು ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಕಲೆಹಾಕಿ ಆರೋಪಿಗಳನ್ನು ಬಂಧಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಆತನ ಆಪ್ತ ಸ್ನೇಹಿತೆ ಪವಿತ್ರಾ ಗೌಡ, ಪವನ್, ರಾಘವೇಂದ್ರ, ನಂದೀಶ್, ಜಗದೀಶ್, ಅನುಕುಮಾರ್, ರವಿಶಂಕರ್, ಧನರಾಜ್, ವಿನಯ್, ನಾಗರಾಜು, ಲಕ್ಷ್ಮಣ, ದೀಪಕ್, ಪ್ರದೋಷ್, ಕಾರ್ತಿಕ್, ಕೇಶವಮೂರ್ತಿ ಹಾಗೂ ನಿಖಿಲ್ ನಾಯ್ಕ್ ಎಂಬ 17 ಮಂದಿ ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ಇತ್ತೀಚೆಗೆ ನಟ ದರ್ಶನ್ ಮತ್ತು ಸಹಚರರು ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಆತಿಥ್ಯ ಪಡೆಯುತ್ತಿದ್ದಾರೆ ಎನ್ನಲಾದ ಫೋಟೋ, ವಿಡಿಯೋ ಬಯಲಾಗಿದ್ದವು. ಆದ್ದರಿಂದ ದರ್ಶನ್ ಸೇರಿ ಹಲವು ವಿಚಾರಣಾಧೀನ ಖೈದಿಗಳನ್ನು ರಾಜ್ಯದ ವಿವಿಧೆಡೆಯ ಜೈಲುಗಳಿಗೆ ಸ್ಥಳಾಂತರಿಸಲಾಗಿತ್ತು.
‘ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಸಂಬಂಧ ಆರೋಪಿಗಳ ವಿರುದ್ಧ ಅಂತಿಮ ವರದಿ ಸಲ್ಲಿಸಲಾಗಿದೆ. ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದ ಸಂಪೂರ್ಣ ವರದಿ ಬಂದಿದೆ. ಆದರೆ, ಹೈದರಾಬಾದ್ನಿಂದ ಸಿಎಫ್ಎಸ್ಎಲ್ (ಫೋರೆನ್ಸಿಕ್ ಲ್ಯಾಬ್) ವರದಿ ಬರುವುದು ಬಾಕಿಯಿದೆ. ಅಲ್ಲಿಗೆ ಕೆಲವು ತಾಂತ್ರಿಕ ಡಿವೈಸ್ಗಳನ್ನು ಕಳಿಸಲಾಗಿತ್ತು. ಅವುಗಳಲ್ಲಿನ ಕೆಲವು ಸಂಪೂರ್ಣ ಮಾಹಿತಿ ಬರುವುದು ಬಾಕಿ ಇದೆ. ಈ ಮೊದಲು ಬಂದ ಕೆಲವು ಮಾಹಿತಿ ಹಿನ್ನೆಲೆ ಈ ಅಂತಿಮ ವರದಿಯನ್ನು ಕೋರ್ಟ್ಗೆ ಸಲ್ಲಿಸಿದ್ದೇವೆ’
-ಬಿ.ದಯಾನಂದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ.
ದರ್ಶನ್ ಸೆಲ್ಗೆ ಹಳೇ ಟಿವಿ: ಬಳ್ಳಾರಿ ಜೈಲಿನಲ್ಲಿರುವ ತಮ್ಮ ಸೆಲ್ಗೆ ಸುದ್ದಿವಾಹಿನಿಗಳನ್ನು ವೀಕ್ಷಿಸಲು ಟಿವಿ ವ್ಯವಸ್ಥೆ ಮಾಡುವುದಾಗಿ ನಟ ದರ್ಶನ್ ಬೇಡಿಕೆಯಿಟ್ಟ ಹಿನ್ನೆಲೆಯಲ್ಲಿ ಅವರಿರುವ 15ನೇ ಸೆಲ್ಗೆ ಹೊಸ ಟಿವಿಯ ಬದಲಾಗಿ ಈಗಾಗಲೇ ಇರುವ ಹಳೇ ಟಿವಿಯನ್ನೇ ರಿಪೇರಿ ಮಾಡಿ ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ.
ಎ2 ಆರೋಪಿಯಾಗಿಯೇ ಮುಂದುವರೆದ ದರ್ಶನ್: ಕೊಲೆ ಪ್ರಕರಣ ದಾಖಲಿಸಿಕೊಳ್ಳುವಾಗ ಎ2 ಆರೋಪಿಯಾಗಿದ್ದ ನಟ ದರ್ಶನ್ ಅವರನ್ನು ಚಾರ್ಜ್ಶೀಟ್ನಲ್ಲಿ ಎ1 ಆರೋಪಿಯಾಗಿ ಬದಲಿಸಬಹುದು ಎನ್ನಲಾಗಿತ್ತು. ಆದರೆ, ಚಾರ್ಜ್ಶೀಟ್ನಲ್ಲಿ ಆರೋಪಿಗಳನ್ನು ಯಥಾವತ್ ಮುಂದುವರೆಸಲಾಗಿದೆ.
ದರ್ಶನ್ ಪಾತ್ರವೇನು..?: ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಅಪಹರಣ ಮಾಡಿಸಿರುವುದು, ಹಲ್ಲೆ ಮಾಡಿರುವುದು, ಹತ್ಯೆಯ ನಂತರ ಪ್ರಕರಣವನ್ನು ಮುಚ್ಚಿಹಾಕಲು ಹಣ ನೀಡಿರುವುದು ದರ್ಶನ್ ಎಂಬುದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಪವಿತ್ರಾ ಗೌಡ ಪಾತ್ರವೇನು?: ಪ್ರಕರಣದ ಎ1 ಆರೋಪಿಯಾಗಿರುವ ಪವಿತ್ರಾ ಗೌಡ, ಹತ್ಯೆಯ ನಡೆಯುವ ಸ್ಥಳದಲ್ಲಿ ಹಾಜರಿದ್ದರು. ಮತ್ತು ರೇಣುಕಾಸ್ವಾಮಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ. ಕೃತ್ಯದ ಸಂದರ್ಭದಲ್ಲಿ ಆ ಸ್ಥಳದಲ್ಲಿದ್ದ ಪವಿತ್ರ ಗೌಡ ಅವರ ಮೊಬೈಲ್ ನಂಬರ್ ಅವರ ಭಾಗಿಯ ಕುರಿತು ಸಾಕ್ಷ್ಯವಾಗಿದೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿರುವುದಾಗಿಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.