ಯತ್ನಾಳ್ ವಿರುದ್ಧ ರಾಷ್ಟ್ರೀಯ ನಾಯಕರಿಗೆ ವರದಿ : ಪಿ.ರಾಜೀವ್
ಬೆಂಗಳೂರು : ಬಿಜೆಪಿ ಶಿಸ್ತಿನ ಪಕ್ಷ. ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಪಕ್ಷದ ಕೋರ್ ಕಮಿಟಿ ಜೊತೆ ಚರ್ಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು, ಪಕ್ಷದ ನಿಯಮ-ಶಿಸ್ತನ್ನು ಉಲ್ಲಂಘಿಸಿ ಯತ್ನಾಳ್ ಸೇರಿ ಯಾರೇ ಹೇಳಿಕೆ ಕೊಟ್ಟರೆ, ಹೋರಾಟ ಮಾಡಿದರೆ ಅದಕ್ಕೂ ಪಕ್ಷಕ್ಕೂ ಸಂಬಂಧ ಇಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಯತ್ನಾಳ್ ಮಾಡುವ ಹೋರಾಟಕ್ಕೆ ರಾಷ್ಟ್ರೀಯ ನಾಯಕರ ಅನುಮತಿ ಪಡೆದಿಲ್ಲ, ರಾಜ್ಯ ನಾಯಕರು ಅಥವಾ ಜಿಲ್ಲಾ ನಾಯಕರಿಂದಲೂ ಅನುಮತಿ ಪಡೆದಿಲ್ಲ, ಹಾಗಾಗಿ ಅದು ಪಕ್ಷದ ಹೋರಾಟ ಆಗುವುದಿಲ್ಲ. ಅದು ಪಕ್ಷದ ಅಶಿಸ್ತು ಆಗುತ್ತದೆ. ಯತ್ನಾಳರ ಕ್ರಮದ ಕುರಿತು ರಾಷ್ಟ್ರನಾಯಕರ ಗಮನಕ್ಕೆ ತರುತ್ತೇವೆ. ಅವರ ವಿರುದ್ಧ ರಾಷ್ಟ್ರೀಯ ನಾಯಕರಿಗೆ ವರದಿ ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಅವಮಾನಿಸದಿರಿ:
‘ಕಾಂಗ್ರೆಸ್ಸಿನ ಅಕ್ರಮಗಳ ದೃಢೀಕರಣಕ್ಕೆ ಮತದಾರರನ್ನು ಮುಖ್ಯಮಂತ್ರಿ ಮತ್ತು ಮಂತ್ರಿಗಳು ಬಳಸಿಕೊಳ್ಳುವುದು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಮಾಡುವ ಅಪಮಾನ. ಉಪಚುನಾವಣೆಯಲ್ಲಿ 3 ಕ್ಷೇತ್ರಗಳನ್ನು ಗೆದ್ದ ಮಾತ್ರಕ್ಕೆ ಸರಕಾರ ಹಗರಣಮುಕ್ತ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಸಿದ್ದರಾಮಯ್ಯ ತಮ್ಮ ಮೇಲಿನ ಆರೋಪಗಳು ಸುಳ್ಳು ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ, ನೀವು ಮಾಡಿರುವ ಹಗರಣಗಳು ಅಕ್ಷಮ್ಯ ಅಪರಾಧಗಳು. ಇದರ ಬಗ್ಗೆ ಬಿಜೆಪಿ ಇನ್ನಷ್ಟು ಉಗ್ರ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.
ಆಡಳಿತ ಪಕ್ಷದಿಂದ ಆಡಳಿತ ಯಂತ್ರದ ಬಳಕೆ, ಜನರ ಮನಸ್ಥಿತಿ, ಜನರ ಓಲೈಕೆಗೆ ಜಾಸ್ತಿ ಅವಕಾಶವಿದ್ದು, ಅಭಿವೃದ್ಧಿ ಆಗಲೆಂದು ಜನರು ಮತ ಕೊಡಬಹುದೇ ಹೊರತು, ನಿಮ್ಮ ಅಕ್ರಮಗಳ ದೃಢೀಕರಣಕ್ಕೆ ಮತದಾರರನ್ನು ಮುಖ್ಯಮಂತ್ರಿ ಮತ್ತು ಸಚಿವರು ಬಳಸಿಕೊಳ್ಳುವುದು ಸರಿಯಲ್ಲ. 3 ಕ್ಷೇತ್ರಗಳ ಗೆಲುವಿನ ಹಿನ್ನೆಲೆಯಲ್ಲಿ ಕೋರ್ಟ್‍ನಲ್ಲಿರುವ ಎಲ್ಲ ಪ್ರಕರಣಗಳ ರದ್ದತಿಗೆ ಸ್ವತಃ ವಕೀಲರಾದ ಸಿದ್ದರಾಮಯ್ಯ ಅಫಿಡವಿಟ್ ಹಾಕಲಿ ಎಂದು ಪಿ.ರಾಜೀವ್ ಸವಾಲೆಸೆದರು.
ಡಿ.9ರಂದು ಅಧಿವೇಶನ ಪ್ರಾರಂಭವಾಗಲಿದ್ದು, ಸದನದೊಳಗೆ ರೈತರ ಪರವಾಗಿ ಬಿಜೆಪಿ ತನ್ನ ಹೋರಾಟವನ್ನು ಮುಂದುವರೆಸಲಿದೆ. ಸದನಕ್ಕೆ ಪ್ರವೇಶ ಆಗುವುದಕ್ಕೆ ಮೊದಲು ರಾಜ್ಯಾದ್ಯಂತ 3 ತಂಡಗಳನ್ನು ರಚಿಸಿ ಸಂಬಂಧಿತ ಜಿಲ್ಲೆಗಳಲ್ಲಿ ಡಿ.4ರಿಂದ 6ರವ ರೆಗೆ ಪ್ರವಾಸ ಮಾಡಿ ಸದನಕ್ಕೆ ಬರಲಿವೆ ಎಂದರು.
‘ನಮ್ಮದು ಶಿಸ್ತಿನ ಪಕ್ಷ. ಪಕ್ಷದಲ್ಲಿ ಕೆಲವರು ಶಿಸ್ತು ಮೀರಿ ಹೋದಾಗ ಅದನ್ನು ಸರಿದಾರಿಗೆ ತರುವುದು ಮುಖಂಡರ ಕರ್ತವ್ಯ. ಅಶಿಸ್ತಿನ ಕುರಿತು ಹೈಕಮಾಂಡ್ ಗಮನ ಸೆಳೆಯುವ ಕೆಲಸವನ್ನು ರಾಜ್ಯಾಧ್ಯಕ್ಷರು ಮಾಡಿದ್ದಾರೆ’
-ಛಲವಾದಿ ನಾರಾಯಣಸ್ವಾಮಿ, ಪರಿಷತ್ ಪ್ರತಿಪಕ್ಷ ನಾಯಕ