ಉಡುಪಿ ಪರ್ಯಾಯಕ್ಕೆ ಮಾರ್ಗಸೂಚಿ ರಚಿಸಲು ಕೋರಿಕೆ: ಮಧ್ಯಪ್ರವೇಶಕ್ಕೆ ಹೈಕೋರ್ಟ್ ನಕಾರ
ಬೆಂಗಳೂರು: ಉಡುಪಿಯ ಅಷ್ಟಮಠಗಳಲ್ಲಿ ಪರ್ಯಾಯ ಮಹೋತ್ಸವಕ್ಕೆ ಮಾರ್ಗಸೂಚಿಗಳು ಅಥವಾ ಬೈಲಾ ರಚನೆಗೆ ಸಂಬಂಧಿಸಿದಂತೆ ಸಮಿತಿ ರಚನೆ ಮಾಡುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯಲ್ಲಿ ಮಧ್ಯಪ್ರವೇಶ ಮಾಡಲು ಹೈಕೋರ್ಟ್ ನಿರಾಕರಿಸಿದೆ.
ಬೆಂಗಳೂರಿನ ಗುರುರಾಜ ಜೀವನರಾವ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ವಿದೇಶಕ್ಕೆ ಪ್ರಯಾಣ ಮಾಡುವವರು ಪರ್ಯಾಯ ಮಹೋತ್ಸವದಲ್ಲಿ ಭಾಗಿಯಾಗಲು ಅವಕಾಶ ನೀಡದಂತೆ ಕೋರಿದರು. ಈ ವೇಳೆ ಮಧ್ಯ ಪ್ರವೇಶಿಸಿದ ನ್ಯಾಯಪೀಠ, ಜ್ಞಾನದ ಸಂಪಾದನೆಗಾಗಿ ವಿದೇಶಿ ಪ್ರವೇಶ ಮಾಡಿದರೆ ತಪ್ಪೇನು. ಅದಕ್ಕೆ ನಾವು ನಿರ್ಬಂಧ ವಿಧಿಸುವುದಕ್ಕೆ ಅವಕಾಶವಿದೆಯೇ ಎಂದು ಪ್ರಶ್ನಿಸಿತು.
ಈ ವೇಳೆ ನ್ಯಾಯಪೀಠವು ಸ್ವಾಮೀಜಿ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದರು ಎಂದರೆ, ಈ ವಿಚಾರದಲ್ಲಿ ನ್ಯಾಯಾಲಯ ಏನು ಮಾಡಲು ಸಾಧ್ಯ ಎಂದು ನ್ಯಾಯಪೀಠವು ಪ್ರಶ್ನಿಸಿತು.
ಪ್ರಕರಣವೇನು?: ಸಮುದ್ರದಾಟಿ ಪ್ರವಾಸ ಕೈಗೊಂಡವರು ಅಷ್ಟ ಮಠಗಳ ಪೀಠಾಧಿಪತಿಯಾಗುವುದಕ್ಕೆ ಅವಕಾಶವಿರುವುದಿಲ್ಲ. ಅಂತಹವರು ಶ್ರೀಕೃಷ್ಣನ ಮೂರ್ತಿ ಸ್ಪರ್ಷ ಮಾಡುವುದಕ್ಕೆ ಅವಕಾಶವಿಲ್ಲ. ಅಲ್ಲದೆ, ನಾಲ್ಕನೇ ಪ್ರತಿವಾದಿಯಾಗಿರುವ ಪುತ್ತಿಗೆ ಮಠದ ಶ್ರೀ ಸುಗಣೇಂದ್ರತೀರ್ಥರು 1997ರಲ್ಲಿ ಅಮೆರಿಕಾ ಪ್ರಯಾಣ ಬೆಳೆಸಲು ಸಾಗರವನ್ನು ದಾಟಿ ಹೋಗಿದ್ದಾರೆ. ಹೀಗಾಗಿ, ಶ್ರೀ ಕೃಷ್ಣನನ್ನು ಸ್ಪರ್ಶಿಸುವುದು ಮತ್ತು ಪೂಜಿಸುವುದಕ್ಕೆ ಅರ್ಹರಾಗಿರುವುದಿಲ್ಲ. ಹೀಗಾಗಿ, ಪರ್ಯಾಯ ಮಹೋತ್ಸವದಲ್ಲಿ ಭಾಗಿಯಾಗುವುದಕ್ಕೆ ಅವಕಾಶವಿರುವುದಿಲ್ಲ. ಹೀಗಾಗಿ ಬೈಲಾ ರಚನೆ ಮಾಡಬೇಕು ಎಂದು ಸೂಚನೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.