ಅಕ್ಕಿ ಸರಬರಾಜು ಮಾಡಲು ಕೇಂದ್ರ ಸಚಿವರಿಗೆ ಮನವಿ : ಸಚಿವ ಕೆ.ಎಚ್.ಮುನಿಯಪ್ಪ
ಹೊಸದಿಲ್ಲಿ: ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ರಾಜ್ಯಕ್ಕೆ ಬರಬೇಕಾದ ಅಕ್ಕಿ ಸರಬರಾಜು ಮಾಡುವಂತೆ ಮನವಿ ಸಲ್ಲಿಸಲಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ತಿಂಗಳಿಗೆ ಎಷ್ಟು ಅಕ್ಕಿ ವಿತರಿಸಲಾಗುತ್ತಿದೆ. ವರ್ಷಕ್ಕೆ ಎಷ್ಟು ಅಕ್ಕಿ ಬೇಕಾಗುತ್ತದೆ ಎಂಬುದರ ಬಗ್ಗೆ ಕೇಂದ್ರ ಸಚಿವರ ಮುಂದೆ ಪ್ರಸ್ತಾಪಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಮಂಗಳವಾರ ಹೊಸದಿಲ್ಲಿಯಲ್ಲಿರುವ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಪಿಎಲ್ ಪಡಿತರ ಚೀಟಿಯಲ್ಲಿ ಎರಡು ಭಾಗ ಇದ್ದು, ಕೇಂದ್ರ ಸರಕಾರದಿಂದ ಹಾಗೂ ರಾಜ್ಯ ಸರಕಾರದಿಂದ ಬಿಪಿಎಲ್ ಪಡಿತರದಾರರಿಗೆ ಅಕ್ಕಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯ ಸರಕಾರ ಕರ್ನಾಟಕದಲ್ಲಿ 13 ಲಕ್ಷ ಬಿಪಿಎಲ್ ಪಡಿತರ ಕಾರ್ಡುಗಳನ್ನು ಹೊಂದಿದ್ದು ಸುಮಾರು 45 ರಿಂದ 55 ಲಕ್ಷ ಫಲಾನುಭವಿಗಳಿಗೆ ಅಕ್ಕಿಯನ್ನು ಕೊಡುತ್ತಿದ್ದೆವು. ನಾವು ಕೇಂದ್ರ ಸ್ವಾಮ್ಯದ ಕೇಂದ್ರೀಯ ಭಂಡಾರ ಎನ್.ಸಿ.ಸಿ.ಎಫ್ ಮುಖಾಂತರ ಅಕ್ಕಿಯನ್ನು ಖರೀದಿ ಮಾಡುತ್ತಿದ್ದೇವೆ. ಈಗ ಅದು ಕೇಂದ್ರ ಸರಕಾರದ ಮುಂದೆ ಬಂದಿದ್ದು 28 ರೂಪಾಯಿಗೆ ಅಕ್ಕಿ ಕೊಡುತ್ತೇವೆ ಎಂದು ಹೇಳಿರುವುದಾಗಿ ಮುನಿಯಪ್ಪ ತಿಳಿಸಿದರು.
ಭಾರತೀಯ ಆಹಾರ ನಿಗಮ(ಎಫ್.ಸಿ.ಐ) ಪ್ರತಿ ಕೆಜಿ ಅಕ್ಕಿಯನ್ನು 34 ರೂಪಾಯಿಯಂತೆ ನೀಡುತ್ತಿತ್ತು. ಈಗ 28 ರೂಪಾಯಿಗೆ ಅಕ್ಕಿ ಕೊಡಲು ಕೇಂದ್ರ ಸರಕಾರ ತೀರ್ಮಾನಿಸಿದೆ. ನಾನು ಆದಷ್ಟು ಬೇಗ ಪ್ರಹ್ಲಾದ್ ಜೋಶಿಯವರನ್ನು ಮಾತನಾಡಿ ನಮ್ಮ ರಾಜ್ಯಕ್ಕೆ ಬೇಕಾಗಿರುವ ಅಕ್ಕಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು.
ನಾವು ರಾಜ್ಯದಲ್ಲಿ ಸರ್ವೇ ಮಾಡಿರುವ ಪ್ರಕಾರ ಶೇ.93ರಷ್ಟು ಗ್ರಾಹಕರು ಐದು ಕೆಜಿ ಅಕ್ಕಿ ಜೊತೆಗೆ ಬೇಳೆ, ಎಣ್ಣೆ, ಸಕ್ಕರೆ ಮುಂತಾದ ಆಹಾರ ಸಾಮಗ್ರಿಗಳನ್ನು ಕೊಟ್ಟರೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ನಾನು ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಚರ್ಚಿಸಿ ಯಾವ ರೀತಿ ಮಾಡಬೇಕು ಅನ್ನೋದನ್ನು ತೀರ್ಮಾನಿಸಲಾಗುವುದು ಎಂದು ಅವರು ಹೇಳಿದರು.
ರಾಜ್ಯದಲ್ಲಿ 13 ಲಕ್ಷ ಬಿಪಿಲ್ ಕಾರ್ಡುಗಳಿದ್ದು 45 ರಿಂದ 55 ಲಕ್ಷ ಪಡಿತರದಾರರಿದ್ದಾರೆ. ಅದಕ್ಕೆ ಪ್ರತಿ ತಿಂಗಳಿಗೆ 20 ಸಾವಿರ ಮೆಟ್ರಿಕ್ ಟನ್ ಅಕ್ಕಿ ಬೇಕಾಗುತ್ತದೆ ಎಂದು ಕೇಂದ್ರ ಸಚಿವರ ಬಳಿ ಪ್ರಸ್ತಾಪಿಸಿರುವುದಾಗಿ ಮುನಿಯಪ್ಪ ತಿಳಿಸಿದರು.