ಜನಸಂಖ್ಯೆಗನುಗುಣವಾಗಿ ಮೀಸಲಾತಿ ನೀಡುವುದು, ವಿವಾದ ಬಗೆಹರಿಸಲು ಇರುವ ಏಕೈಕ ಪರಿಹಾರ : ಸಿಎಂ ಸಿದ್ದರಾಮಯ್ಯ
“ಈ ಸೂತ್ರಕ್ಕೆ ಕಾಂಗ್ರೆಸ್ ಸಿದ್ಧ, ಸವಾಲು ಸ್ವೀಕರಿಸಲು ಪ್ರಧಾನಿ ಮೋದಿ ಸಿದ್ಧರಿದ್ದಾರೆಯೇ?”
ಬೆಂಗಳೂರು : ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ನಿಗದಿಪಡಿಸುವುದೊಂದೇ ಮೀಸಲಾತಿಗೆ ಸಂಬಂಧಿಸಿದ ವಿವಾದ ಬಗೆಹರಿಸಲು ಇರುವ ಶಾಶ್ವತ ಮತ್ತು ಏಕೈಕ ಪರಿಹಾರವಾಗಿದೆ. ಇದಕ್ಕೆ ಕಾಂಗ್ರೆಸ್ ಪಕ್ಷ ಸಿದ್ಧವಿದೆ, ಪ್ರಧಾನಿ ನರೇಂದ್ರ ಮೋದಿ ಅವರು ಈ ಸವಾಲು ಸ್ವೀಕರಿಸಲು ಸಿದ್ಧರಿದ್ದರೆ ಅದನ್ನು ಚುನಾವಣಾ ಭರವಸೆಯಾಗಿ ಘೋಷಿಸಬೇಕು ಇಲ್ಲದೆ ಇದ್ದರೆ ಈಗಿನ ಬಾಯಿ ಬಡಾಯಿಯನ್ನು ನಿಲ್ಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಈ ಕುರಿತು ಫೇಸ್‌ಬುಕ್ ನಲ್ಲಿ ಬರೆದುಕೊಂಡಿರುವ ಅವರು, "ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಕೆಲವು ದಿನಗಳಿಂದ ಮೀಸಲಾತಿಯ ಸುತ್ತ ವಿವಾದವನ್ನು ಸೃಷ್ಟಿಸಿ ರಾಜಕೀಯ ಲಾಭ ಪಡೆಯುವ ಹುನ್ನಾರದಲ್ಲಿ ತೊಡಗಿದ್ದಾರೆ. ಮೀಸಲಾತಿಗೆ ಈಗ ಇರುವ ಶೇಕಡಾ 50ರ ಮಿತಿಯನ್ನು ರದ್ದುಪಡಿಸಿ ಅದನ್ನು ಶೇಕಡಾ 75ಕ್ಕೆ ಹೆಚ್ಚಿಸುವ ಭರವಸೆಯನ್ನು ಕಳೆದ ವಿಧಾನಸಭಾ ಚುನಾವಣೆಯ ನಮ್ಮ ಪ್ರಣಾಳಿಕೆಯಲ್ಲಿಯೇ ಘೋಷಿಸಿದ್ದೆವು. ಈ ಘೋಷಣೆಗೆ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ" ಎಂದು ಹೇಳಿದರು.
"ಬಿಜೆಪಿ ಮತ್ತು ಆರೆಸ್ಸೆಸ್ ಮೀಸಲಾತಿಯನ್ನು ನಿರಂತರವಾಗಿ ವಿರೋಧಿಸುತ್ತಾ ಬಂದಿರುವುದನ್ನು ದೇಶದ ಜನತೆ ಗಮನಿಸಿದ್ದಾರೆ. ಮಂಡಲ್ ವರದಿ ಜಾರಿಯನ್ನು ಮಾತ್ರವಲ್ಲ ಉನ್ನತ ಶಿಕ್ಷಣದಲ್ಲಿ ಮೀಸಲಾತಿಯನ್ನು ಕಾಂಗ್ರೆಸ್ ಸರ್ಕಾರ ಘೋಷಿಸಿದಾಗಲೂ ಬಿಜೆಪಿ ವಿರೋಧಿಸಿ ಬೀದಿಗಿಳಿದಿತ್ತು. ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಿದಾಗ ಬಿಜೆಪಿ ನಾಯಕರಾಗಿದ್ದ ದಿವಂಗತ ರಾಮ ಜೋಯಿಷ್ ಅವರು ಅದನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಆರೆಸ್ಸೆಸ್ ಸರಸಂಘ ಚಾಲಕರಾಗಿದ್ದ ಮೋಹನ್ ಭಾಗವತ್ ಅವರು ಮೀಸಲಾತಿಯನ್ನು ರದ್ದುಪಡಿಸಬೇಕೆಂದು ಹಲವಾರು ಬಾರಿ ಹೇಳಿಕೆಗಳನ್ನು ನೀಡಿದ್ದರು" ಎಂಬುದನ್ನು ನೆನಪಿಸಿದ್ದಾರೆ.
ʼಈ ಚುನಾವಣೆಯಲ್ಲಿ ಸೋಲಿನ ಭೀತಿ ಎದುರಾಗಿರುವ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಪಕ್ಷಕ್ಕೆ ಹಿಂದುಳಿದ ಜಾತಿಗಳು ಮತ್ತು ದಲಿತರ ನೆನಪಾಗಿದೆ. ಇದು ಈ ಸಮುದಾಯಗಳ ಬಗೆಗಿನ ಕಾಳಜಿ ಅಲ್ಲ, ಚುನಾವಣಾ ಲಾಭಕ್ಕಾಗಿ ಹರಿಸುತ್ತಿರುವ ಮೊಸಳೆ ಕಣ್ಣೀರು ಎನ್ನುವುದನ್ನು ಅರ್ಥಮಾಡಿಕೊಳ್ಳುವಷ್ಟು ಹಿಂದುಳಿದ ಜಾತಿಗಳು ಮತ್ತು ದಲಿತರು ಜಾಣರಿದ್ದಾರೆ. ಇಂತಹ ಗಿಮಿಕ್ ಗಳು ಕನಿಷ್ಠ ಕರ್ನಾಟಕದ ನೆಲದಲ್ಲಿ ನಡೆಯಲಾರದುʼ ಎಂದು ಹೇಳಿದರು.
ದಲಿತರ ಬಗ್ಗೆ ಬಾಯಿ ಮಾತಿನಲ್ಲಿ ಇಷ್ಟೊಂದು ಕಾಳಜಿ ತೋರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಕಳಿಸಿರುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಯಾಕೆ ತಿರಸ್ಕರಿಸಿದೆ ಎನ್ನುವುದನ್ನು ರಾಜ್ಯದ ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕದವರೇ ಆಗಿರುವ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ನಾರಾಯಣ ಸ್ವಾಮಿ ಅವರೇ ಮೀಸಲಾತಿ ಹೆಚ್ಚಳದ ಪ್ರಸ್ತಾಪ ನಮ್ಮ ಪರಿಶೀಲನೆಯಲ್ಲಿಯೇ ಇಲ್ಲ ಎಂದು ಹೇಳಿರುವುದು ಪ್ರಧಾನಿಯವರ ಗಮನಕ್ಕೆ ಬಂದಿಲ್ಲವೇ? ಎಂದು ಪ್ರಶ್ನಿಸಿದರು.
ನಮ್ಮ ಸರ್ಕಾರ ಎಸ್ ಸಿಪಿ/ಟಿಎಸ್ ಪಿ ಹಣವನ್ನು ಬೇರೆ ಉದ್ದೇಶಕ್ಕೆ ಬಳಸುತ್ತಿದೆ ಎಂದು ಆರೋಪ ಮಾಡುತ್ತಿರುವ ಬಿಜೆಪಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ನಲ್ಲಿ ಹಣವನ್ನು ಮೀಸಲಿಡುವ ಕಾಯ್ದೆಯನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೊಳಿಸಲು ಯಾಕೆ ಸಾಧ್ಯವಾಗುತ್ತಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸುವ ಧೈರ್ಯ ತೋರುತ್ತಿಲ್ಲ. ಕೇಂದ್ರದಲ್ಲಿ ಮಾತ್ರವಲ್ಲ ಬಿಜೆಪಿ ಅಧಿಕಾರದಲ್ಲಿರುವ ಯಾವ ರಾಜ್ಯದಲ್ಲಿಯೂ ಈ ಕಾಯ್ದೆಯನ್ನು ಜಾರಿಗೆ ತರುವ ಸದ್ಬುದ್ದಿಯನ್ನು ಬಿಜೆಪಿ ತೋರದಿರುವುದು ದಲಿತರ ಬಗೆಗಿನ ಅವರ ಹುಸಿ ಕಾಳಜಿಗೆ ಸಾಕ್ಷಿ ಎಂದು ಟೀಕಿಸಿದರು.
ಮನುಸ್ಮೃತಿಯನ್ನೇ ಸಂವಿಧಾನವನ್ನಾಗಿ ಸ್ವೀಕರಿಸಬೇಕೆಂದು ಹಠ ಹಿಡಿದುಕೂತಿದ್ದ ಆರೆಸ್ಸೆಸ್ ನಿಂದಲೇ ಹುಟ್ಟಿಕೊಂಡಿರುವ ಬಿಜೆಪಿ ಅವಕಾಶ ಸಿಕ್ಕಿದಾಗಲೆಲ್ಲ ಮೀಸಲಾತಿಯನ್ನು ವಿರೋಧಿಸುತ್ತಾ ಬಂದಿರುವುದು ಸ್ವತಂತ್ರ ಭಾರತದ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ದಾಖಲಾಗಿದೆ. ಈ ದುರುದ್ದೇಶದಿಂದಲೇ ಆಗಾಗ ಬಿಜೆಪಿ ನಾಯಕರು ಸಂವಿಧಾನದ ಬದಲಾವಣೆಯ ರಾಗ ತೆಗೆಯುತ್ತಿರುವುದನ್ನು ಕೂಡಾ ದೇಶದ ಜನ ಅರ್ಥ ಮಾಡಿಕೊಂಡಿದ್ದಾರೆ ಏಂದರು.
ಮುಸ್ಲಿಮರಿಗೆ ಮೀಸಲಾತಿ ನಿಗದಿ ಪಡಿಸಿರುವುದು ಈಗಿನ ನಮ್ಮ ಸರ್ಕಾರ ಅಲ್ಲ. ಮೀಸಲಾತಿ ನಿರ್ಣಯಕ್ಕಾಗಿಯೇ ಸ್ಥಾಪಿಸಲಾದ ಹಾವನೂರು, ವೆಂಕಟಸ್ವಾಮಿ, ಚಿನ್ನಪ್ಪರೆಡ್ಡಿ ಮತ್ತು ರವಿವರ್ಮ ಕುಮಾರ್ ಅಧ್ಯಕ್ಷತೆಯ ನಾಲ್ಕು ಹಿಂದುಳಿದ ವರ್ಗಗಳ ಆಯೋಗಗಳು ಕೂಡಾ ಮುಸ್ಲಿಮರಿಗೆ ಮೀಸಲಾತಿಯನ್ನು ಶಿಫಾರಸು ಮಾಡಿತ್ತು. ಈ ಶಿಫಾರಸುಗಳು ಕಾಲಕಾಲಕ್ಕೆ ನ್ಯಾಯಾಲಯದ ಪರಿಶೀಲನೆಗೆ ಕೂಡಾ ಒಳಪಟ್ಟಿದೆ. ಈ ಅವಧಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಸ್ವಿತದಲ್ಲಿತ್ತು ಮತ್ತು ಅಧಿಕಾರದ ಸ್ಥಾನವನ್ನು ಕೂಡ ಹೊಂದಿತ್ತು. ಹೀಗಿದ್ದರೂ ಬಿಜೆಪಿ ಇಲ್ಲಿಯ ವರೆಗೆ ಮುಸ್ಲಿಂ ಮೀಸಲಾತಿಯನ್ನು ಯಾಕೆ ಪ್ರಶ್ನಿಸಿಲ್ಲ? ಎಂಬ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಉತ್ತರ ಇದೆಯೇ? ಎಂದು ಕೇಳಿದರು.
ಬೊಮ್ಮಾಯಿ ಸರ್ಕಾರ ಇದೇ ಮುಸ್ಲಿಂ ಮೀಸಲಾತಿಯನ್ನು ರದ್ದು ಪಡಿಸಿದ ನಂತರ ಸುಪ್ರೀಂ ಕೋರ್ಟ್ ನಲ್ಲಿ ಏನು ಹೇಳಿದ್ದರು ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದರೆ ಮುಸ್ಲಿಂ ಮೀಸಲಾತಿ ಬಗ್ಗೆ ಇಂತಹದ್ದೊಂದು ಅಜ್ಞಾನದಿಂದ ಕೂಡಿದ ಹೇಳಿಕೆಯನ್ನು ನೀಡುತ್ತಿರಲಿಲ್ಲ ಎಂದು ಆಕ್ರೋಶ ಹೊರಹಾಕಿದರು.