‘ಒಳ ಮೀಸಲಾತಿ’ ಶೀಘ್ರದಲ್ಲೇ ಸರಕಾರಕ್ಕೆ ವರದಿ ಸಲ್ಲಿಕೆ: ಆಯೋಗದ ಅಧ್ಯಕ್ಷ ನ್ಯಾ.ನಾಗಮೋಹನ್ದಾಸ್ ಭರವಸೆ

ನ್ಯಾ.ನಾಗಮೋಹನ್ದಾಸ್
ಬೆಂಗಳೂರು: ಪರಿಶಿಷ್ಟರ ಒಳಮೀಸಲಾತಿ ವಿಚಾರದಲ್ಲಿ ಯಾವುದೇ ಗೊಂದಲಬೇಡ, ಯಾರಿಗೂ ಅನ್ಯಾಯವಾಗುವುದಿಲ್ಲ. ಒಳಮೀಸಲಾತಿ ಬಗ್ಗೆ ಸರಕಾರಕ್ಕೆ ಶೀಘ್ರದಲ್ಲೇ ವರದಿ ಸಲ್ಲಿಸಲಾಗುವುದು ಎಂದು ಪರಿಶಿಷ್ಟ ಜಾತಿ ಒಳ ಮೀಸಲಾತಿ ಆಯೋಗದ ಅಧ್ಯಕ್ಷ ನ್ಯಾ.ಎಚ್.ಎನ್. ನಾಗಮೋಹನ್ದಾಸ್ ಭರವಸೆ ನೀಡಿದ್ದಾರೆ.
ಗುರುವಾರ ಇಲ್ಲಿನ ವಸಂತನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ‘ಕರ್ನಾಟಕ ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ’ ನಡೆಸಿದ ‘ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ದಾಸ್ ಅವರಿಗೆ ಮನವಿ ಸಲ್ಲಿಸುವ ಮಾದಿಗ ಸಂಬಂಧಿತ ಜಾತಿಗಳ ಸಮನ್ವಯ ಸಭೆ’ಯಲ್ಲಿ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿ ಒಳ ಮೀಸಲಾತಿಯ ಅಗತ್ಯವಿದೆ. ಅದು ಬೇಕೋ?, ಬೇಡವೋ? ಎಂಬ ಚರ್ಚೆ ಅನಗತ್ಯ. ಸುಪ್ರೀಂಕೋರ್ಟ್ ಅದರ ಅಗತ್ಯವನ್ನು ಹೇಳಿದ್ದು, ಸಾಮಾಜಿಕ, ರಾಜಕೀಯ, ಔದ್ಯೋಗಿಕವಾಗಿ ವರ್ಗೀಕರಣ ಮಾಡಿ ಮೀಸಲಾತಿ ಸೂಚಿಸಿ ಎಂದು ಹೇಳಿದೆ. ಆದ್ದರಿಂದ, ಒಳ ಮೀಸಲಾತಿಯನ್ನು ಹೇಗೆ ಕೊಡಬೇಕು? ಯಾರಿಗೆ ಎಷ್ಟು ಕೊಡಬೇಕು ಎಂಬ ಬಗ್ಗೆ ನಿರ್ಧಾರವಾಗಬೇಕಿದೆ ಎಂದು ನ್ಯಾ.ಎಚ್.ಎನ್. ನಾಗಮೋಹನ್ದಾಸ್ ಹೇಳಿದರು.
ಕೆಲವು ಸಮುದಾಯದವರು ಮೀಸಲಾತಿಯನ್ನು ಪಡೆದುಕೊಂಡು ಉನ್ನತಮಟ್ಟಕ್ಕೆ ಹೋಗಿದ್ದಾರೆ. ಕೆಲವರು ಇನ್ನೂ ಕೆಳಸ್ತರದಲ್ಲೇ ಇದ್ದಾರೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸಂಘರ್ಷವಾಗದಂತೆ ಮೀಸಲಾತಿ ನೀಡಬೇಕು. ಎಲ್ಲರೂ ಸಹೋದರತ್ವ ಭಾವದಿಂದ ಇದನ್ನು ನೋಡಬೇಕು ಎಂದು ನ್ಯಾ.ಎಚ್.ಎನ್. ನಾಗಮೋಹನ್ದಾಸ್ ತಿಳಿಸಿದರು.
ಉಳ್ಳವರಿಗೆ ಸೌಲಭ್ಯ ವಿಳಂಬವಾದರೆ ಸಮಸ್ಯೆಯಾಗುವುದಿಲ್ಲ, ಹಸಿದವರಿಗೆ ಏನೂ ಸಿಗದಿದ್ದರೆ ಸಾಯುತ್ತಾರೆ. ಇದನ್ನೆಲ್ಲ ಪರಿಗಣಿಸಿ ಆಯೋಗ ಸಲಹೆಗಳನ್ನು ನೀಡುತ್ತದೆ. ನೀವೆಲ್ಲ ನೀಡಿರುವ ಸಲಹೆ, ಮನವಿಗಳನ್ನು ಪರಿಶೀಲಿಸಿ, ಹಲವು ವಿಷಯಗಳನ್ನು ಮಾರ್ಗಸೂಚಿಯಾಗಿಸಲಿದ್ದೇವೆ ಎಂದು ನ್ಯಾ.ನಾಗಮೋಹನ್ದಾಸ್ ತಿಳಿಸಿದರು.
ಮೀಸಲಾತಿ ಎಂಬುದು ಶಾಶ್ವತ ಪರಿಹಾರ ಅಲ್ಲ. 100 ಉದ್ಯೋಗಾವಕಾಶಗಳಲ್ಲಿ 98 ಖಾಸಗಿ ಸಂಸ್ಥೆಗಳಲ್ಲಿರುತ್ತವೆ. ಅಲ್ಲಿ ಮೀಸಲಾತಿ ಇಲ್ಲ. ಇನ್ನೂ, ಸರಕಾರಿ ವಲಯದಲ್ಲಿ 2.74ಲಕ್ಷ ಮಂಜೂರು ಹುದ್ದೆ ಖಾಲಿ ಇವೆ. ಅವರು ನೇಮಕವನ್ನೇ ಮಾಡಿಕೊಳ್ಳದಿದ್ದರೆ ಮೀಸಲಾತಿ ಇರುವುದರಿಂದ ಪ್ರಯೋಜನವೇನು?. ಆಳುವ ವರ್ಗ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತದೆ. ಅವರ ಬಗ್ಗೆ ಚರ್ಚಿಸಿ, ಚಿಂತಿಸಿ ನಮ್ಮ ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ನ್ಯಾ.ನಾಗಮೋಹನ್ದಾಸ್ ಕಿವಿಮಾತು ಹೇಳಿದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ‘ಅನ್ಯಾಯಕ್ಕೆ ಒಳಗಾದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕೊಡಿಸಬೇಕು. ಮಾದಿಗ ಸಮುದಾಯದಲ್ಲಿ 45ಕ್ಕೂ ಹೆಚ್ಚು ಒಳಪಂಗಡಗಳಿವೆ. ಅವರನ್ನೆಲ್ಲ ಮಾದಿಗ ಸಮುದಾಯದೊಂದಿಗೇ ಪರಿಗಣಿಸಬೇಕು. ಆದಿ ಜಾಂಬವ, ಆದಿ ದ್ರಾವಿಡ, ಆದಿ ಆಂಧ್ರ ಎಂದು ದಾಖಲಿಸಿದೆ, ನಿರ್ದಿಷ್ಟ ಪಂಗಡದ ಹೆಸರನ್ನೇ ನಮೂದಿಸಬೇಕು’ ಎಂದು ಮನವಿ ಮಾಡಿದರು.
ಹೃದಯದಿಂದ ಆಲಿಸಿದ್ದೇನೆ:
‘ಆಯೋಗ ರಚನೆಯಾದ ಒಂದೂವರೆ ತಿಂಗಳಲ್ಲಿ 2500ಕ್ಕೂ ಹೆಚ್ಚು ಮನವಿ: ‘ಒಳ ಮೀಸಲಾತಿ ಆಯೋಗ ರಚನೆಯಾದ ಒಂದೂವರೆ ತಿಂಗಳಲ್ಲಿ 2500ಕ್ಕೂ ಹೆಚ್ಚು ಮನವಿ ಸಲ್ಲಿಕೆಯಾಗಿವೆ. ಎರಡು ಸಾವಿರಕ್ಕೂ ಹೆಚ್ಚು ಮಂದಿಯೊಂದಿಗೆ ಚರ್ಚೆ ನಡೆಸಿದ್ದೇನೆ. ನಿಮ್ಮ ಎಲ್ಲ ಸಲಹೆ-ಮನವಿಗಳನ್ನು ಕಿವಿಯಿಂದಲ್ಲ, ಹೃದಯದಿಂದ ಆಲಿಸಿದ್ದೇನೆ. ನಿಮ್ಮ ನೋವು, ಕಷ್ಟದ ಅರಿವು ನನಗಿದೆ’
-ನ್ಯಾ.ಎಚ್.ಎನ್.ನಾಗಮೋಹನ್ದಾಸ್ ‘ಪರಿಶಿಷ್ಟ ಜಾತಿ ಒಳಮೀಸಲಾತಿ ಆಯೋಗ’ದ ಅಧ್ಯಕ್ಷ